ನ್ಯೂಸ್ ನಾಟೌಟ್ : ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದಿವಂಗತ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಬಿಜೆಪಿಯಿಂದ ಮನೆ ನಿರ್ಮಿಸಿಕೊಡಲಾಗುತ್ತಿದ್ದು ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.
ಪ್ರವೀಣ್ ನೆಟ್ಟಾರು ಕುಟುಂಬದವರಿಗೆ ಬೆಳ್ಳಾರೆ ಸಮೀಪದ ನೆಟ್ಟಾರುವಿನಲ್ಲಿ 2,700 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸುತ್ತಿದ್ದು, ಅಂದಾಜು ₹60 ಲಕ್ಷ ವೆಚ್ಚವಾಗಬಹುದು. ಸಂಪೂರ್ಣ ವೆಚ್ಚವನ್ನು ಬಿಜೆಪಿ ಪಕ್ಷದಿಂದಲೇ ಭರಿಸಲಾಗುತ್ತಿದೆ. ಮುಗರೋಡಿ ಗುತ್ತಿಗೆ ಕಂಪನಿಗೆ ಕಾಮಗಾರಿ ವಹಿಸಿದ್ದು 2023ರ ಮೇ ವೇಳೆಗೆ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ದಕ್ಷಿಣ ಕನ್ನಡ ಸಂಸದರೂ ಆಗಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಪ್ರವೀಣ್ ಅವರು ಪಕ್ಷ ಮತ್ತು ಸಂಘಟನೆಗಾಗಿ ದುಡಿದಿದ್ದಾರೆ. ಅವರ ಅಗಲುವಿಕೆ ಪಕ್ಷಕ್ಕೆ, ಸಂಘಟನೆಗೆ ದೊಡ್ಡ ನಷ್ಟ. ಮನೆ ನಿರ್ಮಿಸಬೇಕು ಎಂಬ ಅವರ ಕನಸನ್ನು ನನಸು ಮಾಡಲು ಪಕ್ಷವು ಕ್ರಮ ಕೈಗೊಂಡಿದೆ. ಕುಟುಂಬದವರು ನೀಡಿದ ನಕ್ಷೆಯ ಪ್ರಕಾರ, ಕುಟುಂಬವು ವಾಸ್ತವ್ಯದಲ್ಲಿರುವ ಜಾಗದಲ್ಲೇ ಮನೆ ನಿರ್ಮಿಸಲಾಗುತ್ತಿದೆ. ಅವರ ಕುಟುಂಬದ ಜೊತೆಗೆ ಪಕ್ಷ ಮತ್ತು ಸಂಘಟನೆ ಇದ್ದು ಎಲ್ಲಾ ಸಹಾಯ–ನೆರವು ನೀಡಲು ಬದ್ಧರಾಗಿದ್ದೇವೆ. ಅದರ ಮೊದಲ ಹಂತವಾಗಿ ಮನೆ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ತಮ್ಮ ಕುಟುಂಬದ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಪಕ್ಷದ ಮುಖಂಡರಿಗೆ ಧನ್ಯವಾದ ಹೇಳಿದ ಪ್ರವೀಣ್ ಅವರ ಪತ್ನಿ ನೂತನಾ ಕುಮಾರಿ, ‘ಪತಿಯನ್ನು ಹತ್ಯೆ ಮಾಡಿದವರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು. ಪ್ರವೀಣ್ ಅವರ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ ಹಾಗೂ ಕುಟುಂಬ ವರ್ಗದವರು, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.