ನ್ಯೂಸ್ ನಾಟೌಟ್: ಚಿನ್ನಾಭರಣದ ಅಂಗಡಿ ತೆರೆಯುತ್ತಿದ್ದೇವೆ. ಆಶೀರ್ವಾದ ಮಾಡಿ ಎಂದು ವಿನಂತಿಸುತ್ತಾ, ಮಂಕುಬೂದಿ ಎರಚಿ ಅರ್ಚಕರ ಪತ್ನಿಯ ಕತ್ತಿನಲ್ಲಿದ್ದ ಮೂರುವರೆ ಪವನ್ ತೂಕದ ಮಾಂಗಲ್ಯ ಸರವನ್ನು ಎಗರಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಇಲ್ಲಿನ ರಥಬೀದಿಯಲ್ಲಿರುವ ಹನುಮಾನ್ ದೇವಾಲಯಕ್ಕೆ ಹೋಗುವ ದಾರಿಯಲ್ಲಿನ ಅರ್ಚಕರ ಮನೆ ಬಾಗಿಲಿಗೆ ಬಂದ ಹಿಂದಿ ಭಾಷಿಗ ವ್ಯಕ್ತಿಯೋರ್ವ ಮನೆಯಲ್ಲಿದ್ದ ಅರ್ಚಕರ ಪತ್ನಿಯಲ್ಲಿ ತನಗೆ ಸೂತಕ ವಿರುವುದರಿಂದ ದೇವಾಲಯಕ್ಕೆ ಹೋಗಲಾಗುವುದಿಲ್ಲ. ದೇವರಿಗೆ ಹರಕೆ ರೂಪದಲ್ಲಿ ತನ್ನ ಪರವಾಗಿ ಮುನ್ನೂರು ರೂಪಾಯಿ ಸಲ್ಲಿಸಿ ಎಂದು ತಲಾ 100 ರೂಪಾಯಿಯ 3 ನೋಟುಗಳನ್ನು ನೀಡಿ, ಬಳಿಕ ಅದರಲ್ಲಿ ಒಂದು ನೋಟನ್ನು ವಾಪಾಸು ಪಡೆದಿರುತ್ತಾನೆ. ಹೀಗೆ ಹಿಂಪಡೆದ ನೋಟನ್ನು ಮತ್ತೆ ಅವರ ಕೈಗಿತ್ತು ನಿಮ್ಮ ಮಾಂಗಲ್ಯ ಸರವನ್ನು ಅದಕ್ಕೆ ಸ್ಪರ್ಶಿಸಿ ಹಣ ಹಿಂತಿರುಗಿಸಲು ವಿನಂತಿಸುತ್ತಾನೆ. ಈ ವೇಳೆ ನನ್ನ ಮಾಂಗಲ್ಯ ಸರವನ್ನು ನಿಮ್ಮ ನೋಟಿಗೆ ಯಾಕೆ ಸ್ಪರ್ಶಿಸಬೇಕೆಂದು ಅರ್ಚಕರ ಪತ್ನಿ ಪ್ರಶ್ನಿಸುತ್ತಾರೆ. ಅದಕ್ಕೆ ನಾನು ಊರಿನಲ್ಲಿ ಚಿನ್ನಾಭರಣದ ಅಂಗಡಿಯನ್ನು ತೆರೆಯಲಿದ್ದೇನೆ. ಪತಿ ವ್ರತಾ ಮಹಿಳೆಯ ಮಾಂಗಲ್ಯ ಸರವನ್ನು ಸ್ಪರ್ಶಿಸಿದ ಹಣವನ್ನು ಅಂಗಡಿಯೊಳಗಿರಿಸಲು ಸೂಚಿಸಿದ್ದಾರೆ. ಅದಕ್ಕಾಗಿ ನಿಮ್ಮ ಮಾಂಗಲ್ಯ ಸರವನ್ನು ಈ ನೋಟಿಗೆ ಸ್ಪರ್ಶಿಸಿ ನೀಡಿ ಎಂದು ವಿನಂತಿಸುತ್ತಾನೆ. ಆತನ ಮಾತನ್ನು ಸತ್ಯವೆಂದು ನಂಬಿದ ಮಹಿಳೆ ತನ್ನ ಮಾಂಗಲ್ಯವನ್ನು ಹಣಕ್ಕೆ ಸ್ಪರ್ಶಿಸುತ್ತಾರೆ. ಬಳಿಕ ನಡೆದದ್ದು ಮಾತ್ರ ಚಮತ್ಕಾರ..!ಮಾಂಗಲ್ಯ ಸರವನ್ನು ಸಂಪೂರ್ಣ ತೆಗೆದು ಅದನ್ನು ಒಮ್ಮೆ ನೋಟಿನಲ್ಲಿಟ್ಟು ಕೊಡಿ ಎಂದು ತಿಳಿಸಿದಾಗ ಮಹಿಳೆ ಅದೇ ರೀತಿ ಮಾಡಿ ನೋಟನ್ನು ಆತನ ಕೈಯಲ್ಲಿ ನೀಡುತ್ತಾರೆ. ಈ ವೇಳೆ ಸ್ಥಳದಲ್ಲಿ ಏನಾಗುತ್ತದೆ ಎಂದು ಅರಿವಾಗುವಷ್ಟರಲ್ಲಿ ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಒಂದಷ್ಟು ಹೊತ್ತು ಕಳೆದ ಮೇಲೆ ವಾಸ್ತವ ಸ್ಥಿತಿಗೆ ಬಂದ ಮಹಿಳೆ ತನ್ನ ಮಾಂಗಲ್ಯ ಸರ ಕೊರಳಲ್ಲಿ ಇಲ್ಲದಿರುವುದನ್ನು ಕಂಡು ಬೊಬ್ಬೆ ಹೊಡೆದಾಗಲೇ ಅಪರಿಚಿತ ವ್ಯಕ್ತಿ ಮಂಕುಬೂದಿ ಎರಚಿ ಮಾಂಗಲ್ಯ ಸರ ಎಗರಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸ್ಥಳದಲ್ಲಿನ ಸಿಸಿ ಕ್ಯಾಮರಗಳ ಆಧಾರದಲ್ಲಿ ಮಹತ್ವದ ಮಾಹಿತಿ ಕಲೆ ಹಾಕಿದ್ದು, ವಂಚಕರನ್ನು ಪತ್ತೆ ಹಚ್ಚುವ ವಿಶ್ವಾಸವನ್ನು ಎಸ್ಐ ರಾಜೇಶ್ ಕೆ.ವಿ. ವ್ಯಕ್ತಪಡಿಸಿದ್ದಾರೆ.