ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಅಳಿಲು ಸಣ್ಣದಾಗಿರುತ್ತದೆ. ಮರದಿಂದ ಮರಕ್ಕೆ ಜಿಗಿಯುತ್ತಾ ಸಂಭ್ರಮದಿಂದಿರುತ್ತದೆ. ಮುದ್ದಾದ ಸಣ್ಣ ಅಳಿಲನ್ನು ನೋಡುವುದೇ ಒಂದು ಖುಷಿ. ಆದರೆ ಇದೀಗ ಅಪರೂಪವಾದ ಹಾರುವ ಅಳಿಲೊಂದು ಸುಳ್ಯದಲ್ಲಿ ಪ್ರತ್ಯಕ್ಷವಾಗಿದೆ.
ಸುಳ್ಯ ತಾಲ್ಲೂಕಿನಲ್ಲಿ ಅಪರೂಪದ ಟ್ರ್ಯಾವನ್ಕೋರ್ ಹಾರುವ ಅಳಿಲು ಪತ್ತೆಯಾಗಿದ್ದು ಪರಿಸರ ಸಂರಕ್ಷಕ ದೀಪಕ್ ಸುಳ್ಯ ಅವರು ತಮ್ಮ ತೋಟದಲ್ಲಿ ಈ ಅಳಿಲನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇವು ನಿಶಾಚರಿ ಆಗಿರುವುದರಿಂದ ಕಾಣಸಿಗುವುದೇ ಅಪರೂಪ.
ನಿಸರ್ಗ ಕನ್ಸರ್ವೇಷನ್ ಟ್ರಸ್ಟ್ನ ನಾಗರಾಜ್ ಬೆಳ್ಳೂರು ಅವರು, ಇದು ಚಿಕ್ಕ ಹಾರುವ ಅಳಿಲು ಎಂಬುದನ್ನು ಖಚಿತಪಡಿಸಿದ್ದಾರೆ. ಸ್ಥಳೀಯವಾಗಿ ಇದನ್ನು ‘ದರಗು ಪಾಂಜ, ಚಿಕ್ಕ ಪಾಂಜ್ ಎಂದೂ ಕರೆಯುತ್ತಾರೆ. ಪಶ್ಚಿಮಘಟ್ಟದಲ್ಲಿರುವ ಟ್ರ್ಯಾವನ್ ಕೋರ್ ಹಾರುವ ಅಳಿಲು ಪ್ರಸ್ತುತ ದಕ್ಷಿಣ ಏಷ್ಯಾದ ಅತ್ಯಂತ ಚಿಕ್ಕ ಹಾರುವ ಅಳಿಲು ಜಾತಿಗಳಲ್ಲಿ ಒಂದಾಗಿದೆ. ಇದು ಕೇವಲ 32 ಸೆಂ.ಮೀ ಉದ್ದ ಇರುತ್ತದೆ. ದಕ್ಷಿಣ ಭಾರತದಲ್ಲಿ ಅಪರೂಪದ ಅಳಿಲು ಜಾತಿಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ದೈತ್ಯ ಹಾರುವ ಅಳಿಲು (ಇಂಡಿಯನ್ ಜೈಂಟ್) ಮತ್ತು ಟ್ರ್ಯಾವನ್ಕೋರ್ ಹಾರುವ ಅಳಿಲು ಎಂಬ ಎರಡು ಜಾತಿಗಳಿವೆ. ಒಂದು ಕಾಲದಲ್ಲಿ ನಾಶವಾಗಿವೆ ಎಂದು ನಂಬಲಾಗಿದ್ದ ಈ ಟ್ರ್ಯಾವನ್ಕೋರ್, ನೂರು ವರ್ಷಗಳ ನಂತರ ಕೇರಳದ ಪಶ್ಚಿಮಘಟ್ಟದಲ್ಲಿ ಪತ್ತೆಯಾಗಿತ್ತು ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ್.