ನ್ಯೂಸ್ ನಾಟೌಟ್: ಜಗತ್ತಿನಲ್ಲಿ ಕೆಟ್ಟ ಮಗ ಇರಬಹುದು. ಆದರೆ ಕೆಟ್ಟ ತಾಯಿ ಇರಲಿಕ್ಕಿಲ್ಲ ಎಂಬ ಮಾತಿದೆ. ಇಲ್ಲೊಬ್ಬ ಮಗ ತಾಯಿಯ ಮನೆಯನ್ನು ಜೆಸಿಬಿಯಿಂದ ಕೆಡವಿದ್ದಲ್ಲದೆ ಮನೆಯಲ್ಲಿದ್ದ ನಗ-ನಾಣ್ಯಗಳನ್ನು ಕಳವು ಮಾಡಿದ್ದಾನೆ ಎಂದು ತಾಯಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ. ವೃದ್ದೆ ದೂರನ್ನು ದಾಖಲಿಸಿಕೊಂಡ ಮಂಗಳೂರಿನ ಬರ್ಕೆ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.
ಸುನೀತಾ ಜನಾರ್ದನ್ (75) ದೂರುದಾರ ವೃದ್ಧೆಯಾಗಿದ್ದಾರೆ. ಅವರು ತಮ್ಮ ಮಗ ದೀಪಕ್ ಸನಿಲ್ ಜೊತೆ ವಾಸಿಸುತ್ತಿದ್ದರು. ಅಕ್ಟೋಬರ್ 16 ರಂದು ಅವರ ಮನೆಯಲ್ಲಿ ಅಡುಗೆ ಮನೆ ಮತ್ತು ಶೌಚಾಲಯ ನವೀಕರಣ ಕೆಲಸ ನಡೆಯುತ್ತಿದ್ದರಿಂದ ಸುನೀತಾ ಮತ್ತು ಅವರ ಮಗ ದೀಪಕ್ ಇಬ್ಬರೂ ರಾತ್ರಿ ವಿಶ್ರಾಂತಿಗಾಗಿ ಮಗಳು ಸರಿತಾ ಅವರ ಮನೆಗೆ ಹೋಗಿದ್ದರು. ಇದೇ ವೇಳೆ ದೂರುದಾರರಾದ ಸುನೀತಾ ಅವರ ಮತ್ತೋರ್ವ ಪುತ್ರ ಸುದೇಶ್ ಸನಿಲ್ ಅವರು ಅಗೆಯುವ ಯಂತ್ರವನ್ನು ತಂದು ಇಡೀ ಮನೆಯನ್ನು ಕೆಡವಿದ್ದಾರೆ. ಕಬೋರ್ಡ್ ನಲ್ಲಿಟ್ಟಿದ್ದ 27 ಸಾವಿರ ನಗದು, 24 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು ಮತ್ತು ಎಂಟು ಗ್ರಾಂ ತೂಕದ ಚಿನ್ನದ ಸರವನ್ನೂ ತೆಗೆದುಕೊಂಡು ಹೋಗಿದ್ದು, ಈ ವೇಳೆ ಮನೆಯಲ್ಲಿದ್ದ ಎಲ್ಲಾ ಸಾಮಾಗ್ರಿಗಳಿಗೆ ಹಾನಿ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇನ್ನು ನನ್ನ ಮಗ ದೀಪಕ್ ಮತ್ತು ಮಗಳು ಸರಿತಾಗೆ ಕೂಡ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸುನೀತಾ ದೂರಿನಲ್ಲಿ ತಿಳಿಸಿದ್ದಾರೆ.