ನ್ಯೂಸ್ ನಾಟೌಟ್ : ಬೆಂಗಳೂರಿನಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಕೋಟೆ ಫೌಂಡೇಶನ್ನ ಆಶ್ರಯದಲ್ಲಿರುವ ರೈಟ್ ಟು ಲಿವ್ ಸಂಸ್ಥೆಯ ವತಿಯಿಂದ ನಮ್ಮ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಉದ್ಯೋಗ ಆಧಾರಿತ ಉಚಿತ ಕಂಪ್ಯೂಟರ್ ಮತ್ತು ಜೀವನ ಕೌಶಲ್ಯಗಳ ತರಬೇತಿ ನಡೆಯಲಿದೆ. ೦೫-೦೮-೨೦೨೨ ರಂದು ನಮ್ಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಟೆ ಫೌಂಡೇಶನ್ ಅಧ್ಯಕ್ಷ ರಘುರಾಮ ಕೋಟೆಯವರ ಉಪಸ್ಥಿತಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ| ಗಿರೀಶ್ಭಾರದ್ವಾಜ್ ತರಬೇತಿಯನ್ನು ಉದ್ಘಾಟಿಸಿದರು. ಇಂದಿನ ಯುಗ ಡಿಜಿಟಲ್ ಯುಗವಾಗಿದ್ದು ಕಂಪ್ಯೂಟರ್ ಬಳಕೆಯ ತಿಳಿವಳಿಕೆ ಎಲ್ಲರಿಗೂ ಅಗತ್ಯವಾಗಿದೆ. ಯಾವ ಉದ್ಯೋಗ ಮಾಡುವುದಿದ್ದರೂ ಕಂಪ್ಯೂಟರ್ ಜ್ಞಾನವಿದ್ದರೆ ಆ ಉದ್ಯೋಗವನ್ನು ಪರಿಣಾಮಕಾರಿಯಾಗಿ ಮತ್ತು ಪರಿಪೂರ್ಣವಾಗಿ ಮಾಡಲು ಸಾಧ್ಯವಾಗುತ್ತದೆ. ಈ ಉಚಿತ ಕಂಪ್ಯೂಟರ್ ತರಬೇತಿಯನ್ನು ಇಲ್ಲಿ ಏರ್ಪಡಿಸಿರುವುದು ಶ್ಲಾಘನೀಯ ಎಂದು ಭಾರದ್ವಾಜ್ ಹೇಳಿದರು.
ತರಬೇತಿಯನ್ನು ವ್ಯವಸ್ಥೆಗೊಳಿಸಿರುವ ಕೋಟೆ ಫೌಂಡೇಶನ್ನ ಅಧ್ಯಕ್ಷ ರಘುರಾಮಕೋಟೆ ಅವರು ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಕಂಪ್ಯೂಟರ್ ಜ್ಞಾನ ಅಗತ್ಯವಾಗಿದೆ. ಅದಕ್ಕಾಗಿ ಕೊಂಚ ಮಟ್ಟಿಗೆ ಆಂಗ್ಲ ಭಾಷೆಯ ತಿಳಿವಳಿಕೆಯೂ ಅಗತ್ಯವಿರುವುದರಿಂದ ನಾವು ಉಚಿತ ಕಂಪ್ಯೂಟರ್ ತರಬೇತಿಯ ಜತೆಗೆ ಆಂಗ್ಲ ಭಾಷೆಯ ಕೋಚಿಂಗ್ ಕೂಡ ನೀಡಬಯಸುತ್ತೇವೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಕೋಟೆ ಫೌಂಡೇಶನ್ ವತಿಯಿಂದ ಈ ರೀತಿಯ ತರಬೇತಿಗಳ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಹೇಳಿದರು. ಸಭಾಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷರಾದ ಡಾ| ಚಂದ್ರಶೇಖರ ದಾಮ್ಲೆಯವರು ಕಂಪ್ಯೂಟರ್ ಶಿಕ್ಷಣ ಎಲ್ಲ ಕ್ಷೇತ್ರದಲ್ಲಿಯೂ ಅಗತ್ಯವಿದೆ. ಇಲ್ಲಿ ನಾವು ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಕಂಪ್ಯೂಟರ್ ಶಿಕ್ಷಣ ನೀಡುವುದಲ್ಲ. ವಿದ್ಯಾರ್ಥಿಗಳ ಪೋಷಕರು ಕೂಡ ಈ ತರಬೇತಿಯಲ್ಲಿ ಭಾಗವಹಿಸಬಹುದುಎಂದರು.
ಪತ್ರಕರ್ಹ ಹರೀಶ್ ಬಂಟ್ವಾಳ್ ಶುಭಹಾರೈಸಿ ಮಾತನಾಡಿದರು. ನಮ್ಮ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಹಾಗೂ ರೈಟ್ ಟು ಲಿವ್ ಸಂಸ್ಥೆಯ ಪ್ರತಿನಿಧಿ ವಂದಿಸಿದರು. ಸ್ನೇಹದ ಹಳೆವಿದ್ಯಾರ್ಥಿ ಹಾಗೂ ಕೋಟೆ ಫೌಂಡೇಶನ್ ಸಹೋದ್ಯೋಗಿ ಸಾಯಿರಂಜನ್ ಕಲ್ಚಾರ್, ವೆಂಕಟ್ರಾಜ್, ಹಲವಾರು ಮಂದಿ ವಿದ್ಯಾರ್ಥಿ ಪೋಷಕರು ನಮ್ಮ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ಅಕ್ಟೋಬರ್ ತಿಂಗಳಿನಿಂದ ಮುಂದಿನ ಜನವರಿ ತಿಂಗಳ ತನಕ ಈ ತರಬೇತಿ ನಡೆಯಲಿದೆ.ಇದೇ ದಿನ ಶಾಲೆಯಲ್ಲಿ ಶಾರದಾ ಪೂಜೆ, ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ಹೆತ್ತವರ ಸಭೆ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು,ಪೋಷಕರು ಭಾಗವಹಿಸಿದ್ದರು.