ನ್ಯೂಸ್ ನಾಟೌಟ್ : ಗಾಂಧಿ ಪಾರ್ಕ್ನಲ್ಲಿ ಭಾನುವಾರ ದಸರಾ ಅಂಗವಾಗಿ ಮಹಾನಗರ ಪಾಲಿಕೆಯಿಂದ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ದೂರದ ಬೆಂಗಳೂರಿನಿಂದ ಬಂದಿದ್ದ ಶ್ವಾನ ‘ಭೀಮ’ ಜನರನ್ನು ಆಕರ್ಷಿಸಿತು.
ಟಿಬೆಟಿಯನ್ ಮಸ್ತಿಫ್ ತಳಿಯ ಭೀಮ ಬಹುತೇಕ ಕರಡಿ ಹೋಲುತ್ತಾನೆ. ಈ ಶುನಕನ ಬೆಲೆಯ ಬಗ್ಗೆ ಸಂಘಟಕರು ಮಾಡಿದ್ದ ಪ್ರಚಾರದಿಂದಾಗಿ ಹಿಂದಿನ ದಿನವೇ ನಗರದ ಶ್ವಾನ ಪ್ರಿಯರ ಕುತೂಹಲ ಇಮ್ಮಡಿಗೊಂಡಿತ್ತು. ಹೀಗಾಗಿ ವಾರಾಂತ್ಯದ ರಜೆಯ ದಿನ ‘ಭೀಮ‘ನ ಬರುವಿಕೆಗೆ ಮುನ್ನವೇ ಜನರು ಗಾಂಧಿ ಪಾರ್ಕ್ನಲ್ಲಿ ಜಮಾಯಿಸಿದ್ದರು. ಈ ಶ್ವಾನದ ಫೋಟೊ ತೆಗೆದುಕೊಂಡರು.ಅದರ ನಿರ್ವಹಣೆ ವೆಚ್ಚ, ಬದುಕಿನ ರೀತಿ ಸಂಘಟಕರಿಂದ ಕೇಳಿ ತಿಳಿದುಕೊಂಡರು. ಅದು ಗಾಂಭೀರ್ಯದಿಂದ ಕೆಲ ಹೊತ್ತು ಸಮಾರಂಭದ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದನ್ನು ನೋಡಲು ನೂಕು–ನುಗ್ಗಲು ಉಂಟಾಯಿತು. ಈ ಗಡಿಬಿಡಿಯಲ್ಲಿ ‘ಭೀಮ’ನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಇಚ್ಛೆ ಈಡೇರದೆ ಹಲವರು ‘ಇದು ನಾವು ಸಾಕಲು ತಕ್ಕುದ್ದಲ್ಲ. ಈ ಶ್ವಾನದ ಸಹವಾಸ ನಮಗಲ್ಲ’ ಎಂದು ಗೊಣಗುತ್ತಾ ಮರಳಿದರು.
ಬೆಂಗಳೂರಿನಿಂದ ಹಿಂದಿನ ದಿನವೇ ರೇಂಜ್ ರೋವರ್ ಕಾರಿನಲ್ಲಿ ತಂದಿದ್ದ ಈ ಶ್ವಾನವನ್ನು ಇಲ್ಲಿನ ಬಿ.ಎಚ್. ರಸ್ತೆಯ ತ್ರಿಸ್ಟಾರ್ ಹೋಟೆಲ್ನಲ್ಲಿ ಇಡಲಾಗಿತ್ತು. ‘ಅದಕ್ಕೆ ಹವಾನಿಯಂತ್ರಿತ ವ್ಯವಸ್ಥೆ ಬೇಕಿದ್ದರಿಂದ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು’ ಎಂದು ಶ್ವಾನ ಮೇಳದ ಸಂಘಟಕ, ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ ಹೇಳಿದರು. ಮೊದಲಿಗೆ ನಾಯಿ ಕರೆತರಲು ಹೆಲಿಕಾಪ್ಟರ್ ವ್ಯವಸ್ಥೆ ಕೇಳಲಾಗಿತ್ತು. ಕೊನೆಗೆ ಜೆಡಿಎಸ್ ಮುಖಂಡ ಎಂ.ಶ್ರೀಕಾಂತ ಅವರ ಪ್ರಯತ್ನದಿಂದ ಐಷಾರಾಮಿ ಕಾರಿನ ವ್ಯವಸ್ಥೆ ಮಾಡಲಾಯಿತು ಎಂದು ತಿಳಿದುಬಂದಿದೆ.