ನ್ಯೂಸ್ ನಾಟೌಟ್ : ಕಳೆದ ಕೆಲವು ತಿಂಗಳಿನಿಂದ ಸಂಪಾಜೆಯ ಕೈಪಡ್ಕ ರಸ್ತೆ ತಿರುಗುವಲ್ಲಿರುವ ಸೇತುವೆಯಲ್ಲಿ ನಿಂತು ಪಯಸ್ವಿನಿ ನದಿಗೆ ಅಪರಿಚಿತರು ಕಸ ಎಸೆಯುತ್ತಿದ್ದಾರೆ. ಇದೀಗ ಭಾನುವಾರ ಮುಂಜಾನೆ ಅಪರಿಚಿತ ವ್ಯಕ್ತಿಯೊಬ್ಬ ಸ್ಕೂಟಿಯಲ್ಲಿ ಬಂದು ತ್ಯಾಜ್ಯವನ್ನು ನದಿಗೆ ಎಸೆದು ಕತ್ತಲಲ್ಲಿ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಳ್ಳಂ ಬೆಳಗ್ಗೆ 4 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಬಂದ ಅಪರಿಚಿತ ವ್ಯಕ್ತಿ ಕೈಪಡ್ಕ ರಸ್ತೆಯಲ್ಲಿರುವ ಸೇತುವೆ ಗೆ ಬಂದು ಅಲ್ಲಿ ಸ್ಕೂಟಿ ನಿಲ್ಲಿಸಿ ರಾಶಿ-ರಾಶಿ ತ್ಯಾಜ್ಯವನ್ನು ನದಿಗೆ ಎಸೆದಿದ್ದಾನೆ. ತಕ್ಷಣ ಸ್ಥಳೀಯರು ಇದನ್ನು ಗಮನಿಸಿ ಲೈಟ್ ಅನ್ ಮಾಡಿದಾಗ ಆತ ಸ್ಕೂಟಿ ಸ್ಟಾರ್ಟ್ ಮಾಡಿ ಕೈಪಡ್ಕ ರಸ್ತೆಯಲ್ಲಿ ಒಳಗೆ ಸಾಗಿ ಕತ್ತಲಲ್ಲಿ ಪರಾರಿಯಾಗಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ ದೇಶಕ್ಕೆ ಸ್ವಚ್ಛ ಭಾರತ್ ಕಲ್ಪನೆ ನೀಡಿದ್ದಾರೆ. ಮತ್ತೊಂದು ಕಡೆ ಇಂಥಹ ಅವಿವೇಕಿಗಳು ನದಿಗೆ ತ್ಯಾಜ್ಯ ಎಸೆದು ನದಿಯನ್ನು ಅಪವಿತ್ರಗೊಳಿಸುತ್ತಿದ್ದಾರೆ. ಸಾರ್ವಜನಿಕರಿಗೆ ಕಸ ಎಸೆಯುವುದಕ್ಕೆ ಅಥವಾ ತ್ಯಾಜ್ಯ ನಿರ್ವಹಣೆಗೆಂದು ಗ್ರಾಮ ಪಂಚಾಯತ್ ಸಂಪಾಜೆ ಸಕಲ ವ್ಯವಸ್ಥೆ ಮಾಡಿದೆ. ಪಂಚಾಯತ್ ವತಿಯಿಂದ ಕಸ ಸಂಗ್ರಹಿಸುವುದಕ್ಕೆ ವಾಹನ ವ್ಯವಸ್ಥೆಯೂ ಇದೆ. ಇಷ್ಟೆಲ್ಲ ಸೌಕರ್ಯವನ್ನು ನೀಡಿರುವಾಗ ಕಸವನ್ನು ಅಲ್ಲಿ ನೀಡದೆ ಈ ರೀತಿ ರಾತ್ರೋ ರಾತ್ರಿ ಬಂದು ನದಿಗೆ ಬಿಸಾಡುವುದೆಂದರೆ ಮೂರ್ಖತನದ ಪರಮಾವಧಿಯೇ ಸರಿ. ಸಂಪಾಜೆ ಸುತ್ತಮುತ್ತ ನದಿ ಪ್ರದೇಶಗಳಲ್ಲಿ ತಡರಾತ್ರಿ ಆಗಾಗ್ಗೆ ಇಂತಹ ಪ್ರಕರಣಗಳು ನಡೆಯುತ್ತಿರುತ್ತವೆ. ಹೀಗಾಗಿ ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ನದಿ ನೀರಿನ ರಕ್ಷಣೆ ಹಾಗೂ ನಮ್ಮ ಪರಿಸರವನ್ನು ಸ್ವಚ್ಛವಾಗಿಡುವ ಪ್ರಯತ್ನ ತುರ್ತಾಗಿ ನಡೆಸಬೇಕಿದೆ. ಇಲ್ಲದಿದ್ದರೆ ಮುಂದೊಂದು ದಿನ ನಮ್ಮ ಪಯಸ್ವಿನಿಗೆ ಬೆಂಗಳೂರಿನ ರಿಷಭಾವತಿ ಹಾಗೂ ಅರ್ಕಾವತಿ ನದಿಗೆ ಆದ ಗತಿಯಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಸಂಪಾಜೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ.