ನ್ಯೂಸ್ ನಾಟೌಟ್ : ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಬಾಕ್ಸಾಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಪ್ರಾದೇಶಿಕ ಸೊಗಡಿನ ಚಿತ್ರವೀಗ ಎಲ್ಲ ಭಾಷೆಗಳಿಗೂ ಡಬ್ ಆಗಲು ಸಿದ್ಧವಾಗಿದೆ. ಆದಾಗ್ಯೂ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಒಂದಲ್ಲ ಒಂದು ಕಾರಣಕ್ಕೆ ಈ ಸಿನಿಮಾ ಪ್ರತಿ ದಿನವೂ ಸುದ್ದಿ ಮಾಡುತ್ತಿದೆ.
ಪ್ರಸ್ತುತ ಕಾಂತಾರದ ಹಾಡುಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಮಲಯಾಳ ಮತ್ತು ಮರಾಠಿಯಿಂದ ಹಾಡುಗಳನ್ನು ಎತ್ತಿ ತಂದಿದ್ದಾರೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ. ಕೆಲವರು ಎತ್ತಿದ್ದಲ್ಲ, ಸ್ಫೂರ್ತಿ ಪಡೆದಿದ್ದು ಎಂಬುದಾಗಿಯೂ ಟ್ರೋಲ್ ಮಾಡುತ್ತಿದ್ದಾರೆ.
ಅತ್ಯಂತ ಜನಪ್ರಿಯ, ಸದ್ಯ ಟ್ರೆಂಡಿಂಗ್ನಲ್ಲಿರುವ ‘ಸಿಂಗಾರಸಿರಿಯೇ’ ಹಾಡಿನ ಮೂಲ ಮರಾಠಿ ಎಂದು ಅನೇಕರು ಮೂಲ ಲಿಂಕ್ನೊಂದಿಗೆ ಪೋಸ್ಟ್ ಮಾಡುತ್ತಿದ್ದಾರೆ. 2014ರಲ್ಲಿ ಬಿಡುಗಡೆಗೊಂಡ ‘ನಟರಂಗ್’ ಮರಾಠಿ ಚಿತ್ರದ ಅಪ್ಸರ ಅಲಿ ಹಾಡಿನ ಟ್ಯೂನ್ ಹಾಗೂ ಸಿಂಗಾರ ಸಿರಿಯೇ ಟ್ಯೂನ್ಗೆ ಬಹುತೇಕ ಸಾಮ್ಯತೆ ಇದೆ. ಹೀಗಾಗಿ ಈ ಹಾಡಿನ ಮೂಲ ಮರಾಠಿ ಎಂದು ನೆಟ್ಟಿಗರು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
ಸಿನಿಮಾದ ಇನ್ನೊಂದು ಜನಪ್ರಿಯ ಗೀತೆ ‘ವರಾಹ ರೂಪಂ’ಗೆ ಮೂಲ ಮಲಯಾಳದ ಮ್ಯೂಸಿಕ್ ವಿಡಿಯೊ ಗೀತೆ ‘ನವರಸಂ’ ಎನ್ನಲಾಗುತ್ತಿದೆ. ಅದರ ಲಿಂಕ್ನೊಂದಿಗೆ ವರಾಹ ಗೀತೆಯ ಲಿಂಕ್ ಅನ್ನು ಶೇರ್ ಮಾಡಿ ಹೋಲಿಕೆ ಮಾಡುತ್ತಿದ್ದಾರೆ ನೆಟ್ಟಿಗರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಗೀತ ನಿರ್ದೇಶಕ ಅಜನೀಶ್, ‘ಇದು ಕದ್ದಿರುವುದಲ್ಲ. ನವರಸಂ ಹಾಗೂ ವರಾಹ ರೂಪಂ ಒಂದೇ ರಾಗದಲ್ಲಿ ಇರುವುದರಿಂದ ಅದೇ ರೀತಿ ಕೇಳುತ್ತಿದೆ. ಇಂದು ಹಂಚಿಕೆಯಾಗುತ್ತಿರುವ ಮೂಲ ಹಾಡನ್ನು ಕೇಳಿದ್ದೆ. ಚಿತ್ರದ ಸನ್ನಿವೇಶಕ್ಕೆ ಆ ರೀತಿಯದ್ದೇ ಒಂದು ಭಕ್ತಿ ಭಾವ ಬೇಕಿತ್ತು. ಹಾಗಾಗಿ ಅದೇ ರಾಗದಲ್ಲಿ ಟ್ಯೂನ್ ಮಾಡಲಾಗಿದೆ’ಎಂದಿದ್ದಾರೆ.
ಈ ಹಿಂದೆ ಅಜನೀಶ್ ಸಂಗೀತ ಸಂಯೋಜಿಸಿದ್ದ ಕಿರಿಕ್ ಪಾರ್ಟಿಯ ಕೆಲವು ಹಾಡುಗಳಿಗೂ ಇದೇ ರೀತಿಯ ಪ್ರತಿಕ್ರಿಯೆ ಬಂದಿತ್ತು. ಈ ಹಿಂದೆ ಅರ್ಜುನ್ ಜನ್ಯ, ಹರಿಕೃಷ್ಣ ಅವರ ಕೆಲವು ಗೀತೆಗಳನ್ನು ಸಾಮ್ಯವಿರುವ ಬೇರೆ ಭಾಷೆಯ ಗೀತೆಗೆ ಹೋಲಿಕೆ ಮಾಡಿ ಟ್ರೋಲ್ ಮಾಡಿದ್ದರು.