ನ್ಯೂಸ್ ನಾಟೌಟ್: ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಂಟು ಕಡೆ ಹೆದ್ದಾರಿ ಸಂಪರ್ಕ ಬಂದ್ ಆಗಿದೆ. ಇಂದು ಬೆಳಗ್ಗೆ 9 ಗಂಟೆಯಿಂದ ಸಂಚಾರ ಬಂದ್ ಮಾಡೋಕೆ ರೈತರು ಸಿದ್ಧರಾಗಿದ್ದಾರೆ. ಪ್ರತಿ ಟನ್ ಕಬ್ಬಿಗೆ 4,500 ರೂ ನಿಗದಿ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರು ಹೆದ್ದಾರಿ ಬಂದ್ ಮಾಡಿದ್ದಾರೆ.
ರೈತ ಸಂಘ ದಸರಾ ಹಬ್ಬದೊಳಗೆ ದರ ಘೋಷಣೆಗೆ ಕಾಲಾವಕಾಶ ನೀಡಿತ್ತು. ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಹೆದ್ದಾರಿ ಸಂಚಾರ ಬಂದ್ ಗೆ ಕರೆ ನೀಡಲಾಗಿದೆ. ಹಸು, ಕುರಿ, ಎತ್ತಿನಗಾಡಿ, ಟ್ರ್ಯಾಕ್ಟರ್ಗಳೊಂದಿಗೆ ರಸ್ತೆಯಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ವಿ.ಸಿ.ಫಾರ್ಮ್ ಗೇಟ್, ಮದ್ದೂರಿನಲ್ಲಿ ಅಡಿಗಾಸ್ ಹೋಟೆಲ್, ಮಳವಳ್ಳಿಯಲ್ಲಿ ಅಂಚೆದೊಡ್ಡಿ ಗೇಟ್, ಶ್ರೀರಂಗಪಟ್ಟಣದಲ್ಲಿ ಕಿರಂಗೂರು ವೃತ್ತ, ಕೆ.ಆರ್.ಪೇಟೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಂತೆಯೇ ಮೈಸೂರು ಜಿಲ್ಲೆಯಲ್ಲಿ ಟಿ.ನರಸೀಪುರದ ಎಡತೊರೆ, ಇಲವಾಲ ಮತ್ತು ನಂಜನಗೂಡಿನ ಕಬಿನಿ ಸೇತುವೆ ಬಳಿ ಸಂಚಾರ ಬಂದ್ ಮಾಡಲಾಗಿದೆ.