ನ್ಯೂಸ್ ನಾಟೌಟ್ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರನ್ನು ಓವರ್ ಟೇಕ್ ಮಾಡುವಾಗ ನಡೆದ ಮಾತಿನ ಚಕಮಕಿಗೆ ಸಂಬಂಧಿಸಿದ ಕೇಸ್ ನ್ನು ಸರಕಾರವು ಸಿಐಡಿಗೆ ವರ್ಗಾಯಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಗುರುವಾರ ರಾತ್ರಿ ಸುಮಾರು 11.15ಕ್ಕೆ ಶಾಸಕ ಹರೀಶ್ ಪೂಂಜಾ ಫರಂಗಿಪೇಟೆ ಬಳಿ ಸಂಚರಿಸುತ್ತಿದ್ದಾಗ ಓವರ್ ಟೇಕ್ ಮಾಡುವ ವಿಚಾರದಲ್ಲಿ ಮಾತಿನಚಕಮಕಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬೆಳಿಗ್ಗೆ ಶಾಸಕರ ಮೇಲೆ ಮಾರಕಾಸ್ತ್ರ ಬೀಸಿದ್ದರು ಎಂದು ದೂರು ನೀಡಲಾಗಿತ್ತು. ಖುದ್ದು ಹರೀಶ್ ಪೂಂಜಾ ತಲವಾರು ದಾಳಿ ಯತ್ನ ನಡೆದಿದೆ ಎಂದು ಹೇಳಿಕೆ ನೀಡಿದ್ದರು. ಜಿಹಾದಿಗಳು ಕೃತ್ಯ ನಡೆಸಿದ್ದಾರೆಂದು ಹೇಳಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಫಳ್ನೀರ್ ನಿವಾಸಿ ರಿಯಾಜ್ (38) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು. ಜೊತೆಗೆ ಘಟನೆಗೆ ಸಂಬಂಧಿಸಿದ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇದು ಓವರ್ ಟೇಕ್ ವಿಚಾರಕ್ಕೆ ನಡೆದ ಮಾತಿನ ಚಕಮಕಿ ಹೊರತು ತಲವಾರು ಬೀಸಿಲ್ಲ, ಕಾರಿನಲ್ಲಿ ಓರ್ವ ಮಾತ್ರ ಇದ್ದ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದರು.