ನ್ಯೂಸ್ ನಾಟೌಟ್: ಮತ್ತೊಮ್ಮೆ ಭೂಕಂಪದ ಅನುಭವ ಆಗಿದೆ. ಕಳೆದ 72 ಗಂಟೆಗಳಿಂದ ವಿಜಯಪುರ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯ ಜತೆಗೆ ಭೂಕಂಪನವೂ ಹೆಚ್ಚುತ್ತಿದೆ. 72 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಕಡಿಮೆ ತೀವ್ರತೆಯ ನಾಲ್ಕು ಭೂಕಂಪಗಳು ವರದಿಯಾಗಿವೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಧಿಕಾರಿಗಳು ಈ ಪ್ರದೇಶದಲ್ಲಿ ವರದಿಯಾದ ಸಣ್ಣ ಕಂಪನಗಳನ್ನು ದೃಢಪಡಿಸಿದ್ದಾರೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಭೂಕಂಪನದಿಂದ ಯಾವುದೇ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಕೆಎಸ್ಎನ್ಡಿಎಂಸಿ ಪ್ರಕಾರ, ಶುಕ್ರವಾರ 2.0 ಮತ್ತು 1.9 ತೀವ್ರತೆಯ ಎರಡು ಭೂಕಂಪನಗಳು ದಾಖಲಾಗಿವೆ. ಈ ಎರಡೂ ಭೂಕಂಪನಗಳ ಕೇಂದ್ರಬಿಂದು ಬಸವನಬಾಗೇವಾಡಿಯ ಉಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಕಿ.ಮೀ ಆಳದಲ್ಲಿ ದಾಖಲಾಗಿದೆ. ಇವೆರಡರ ನಡುವೆ ಒಂದು ನಿಮಿಷದ ವ್ಯತ್ಯಾಸವಿದೆ. ಇದಾದ ಎರಡು ಗಂಟೆಗಳ ನಂತರ, ಅದೇ ಗ್ರಾಮದಲ್ಲಿ 3.2 ತೀವ್ರತೆಯ ಮತ್ತೊಂದು ಭೂಕಂಪನ (ಮೂರನೇ ಭೂಕಂಪನ) ದಾಖಲಾಗಿದೆ. ಅಲ್ಲಿಯೇ 10 ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ.