ನ್ಯೂಸ್ ನಾಟೌಟ್: ಅಪಘಾತದಲ್ಲಿ ಗಂಭೀರ ಗಾಯಗೊಂಡು ಕಾಲು ನೋವಿನಿಂದ ನಡೆಯುವುದಕ್ಕೂ ಸಾಧ್ಯವಾಗದೆ ನರಳುತ್ತಿದ್ದ ಬಾಲಕನೊಬ್ಬ ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟದಲ್ಲಿ ತೃತೀಯ ಸ್ಥಾನ ಪಡೆದು ಸುದ್ದಿಯಾಗಿದ್ದಾನೆ.
ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಡಬ್ಬಡ್ಕದ ಕೊಪ್ಪದ ಮನೆಯ ಭವಾನಿ ಕುಮಾರ್ – ಭಾರತಿ ದಂಪತಿಗಳ ಸುಪುತ್ರ ನಮನ್ ಎಂಬ ಬಾಲಕ 2022 ಸೆಪ್ಟೆಂಬರ್ 3 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿ ರಸ್ತೆ ದಾಟುತ್ತಿದ್ದಾಗ ಬೈಕ್ವೊಂದು ಬಂದು ಗುದ್ದಿತ್ತು. ಈ ಹಿನ್ನೆಲೆಯಲ್ಲಿ ಬಾಲಕನ ಕಾಲಿಗೆ ಗಂಭೀರ ಪೆಟ್ಟು ಬಿದ್ದಿತ್ತು. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಅಪಘಾತಕ್ಕೂ ಮೊದಲು ಈ ವಿದ್ಯಾರ್ಥಿ ವಲಯ ಮಟ್ಟದ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದ. ಆದರೆ ಅಪಘಾತದ ಪರಿಣಾಮದಿಂದಾಗಿ ಸೆ.೨೨ರಂದು ನಡೆಯಬೇಕಿದ್ದ ತಾಲೂಕು ಮಟ್ಟದಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದೇ ಭಾವಿಸಲಾಗಿತ್ತು.
ಬಾಲಕನಿಗೆ ಶಾಲೆಯ ಅಧ್ಯಾಪಕರಿಂದ ಹಾಗೂ ಆಡಳಿತ ಮಂಡಳಿಯಿಂದ ಪ್ರೋತ್ಸಾಹ ದೊರೆಯಿತು. ಏನೂ ಆಗುವುದಿಲ್ಲ ಮನಸ್ಸು ಮಾಡಿದ್ರೆ ನೀನು ಹಾಡಬಹುದು ನಾವೆಲ್ಲ ಜತೆಗಿದ್ದೇವೆ ಅಂದ್ರು. ಕೊನೆಗೂ ಹುಡುಗನನ್ನು ಕಾರು ಮಾಡಿ ಮಡಿಕೇರಿಯ ಸ್ಪರ್ಧೆ ನಡೆಯುವ ಜಾಗಕ್ಕೆ ಪೋಷಕರು ಕರೆದುಕೊಂಡು ಹೋದರು. 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಹುಡುಗ ರಾಮ..ರಾಮ..ರಾಮ ಎಂದು ಹಾಡು ಹೇಳುತ್ತಲೇ ಜಡ್ಜ್ ಗಳ ಮನ ಸೆಳೆದ. ನೋವಿನ ನಡುವೆ ಹೆಚ್ಚು ಅಭ್ಯಾಸ ನಡೆಸುವುದಕ್ಕೆ ಸಾಧ್ಯವಾಗದಿದ್ದರೂ ಮೂರನೇ ಸ್ಥಾನ ಪಡೆದುಕೊಳ್ಳುವಲ್ಲಿ ನಮನ್ ಯಶಸ್ವಿಯಾದ. ಈ ಹುಡುಗನ ಛಲಕ್ಕೆ ಈಗ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಾಲಕ ಇದೇ ರಾಮ..ರಾಮ ಹಾಡನ್ನು ವಲಯ ಮಟ್ಟದಲ್ಲಿ ಹಾಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದ. ಇದರ ವಿಡಿಯೋವನ್ನು ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಿ..
ಈ ಹುಡುಗನ ಕುಟುಂಬಕ್ಕೆ ಮೇಲಿಂದ ಮೇಲೆ ಅಗ್ನಿ ಪರೀಕ್ಷೆಗಳು ಎದುರಾಗುತ್ತಲೇ ಇವೆ. ಇತ್ತೀಚಿಗೆ ಅವರ ಮನೆಯ ಸಮೀಪದಲ್ಲಿ ಭಾರಿ ಜಲಸ್ಫೋಟ ಸಂಭವಿಸಿತ್ತು. ಪರಿಣಾಮ ಇವರ ಕುಟುಂಬವಿಡೀ ಗಂಜಿ ಕೇಂದ್ರದಲ್ಲಿ ಇದ್ದು ದಿನ ಕಳೆಯಬೇಕಾಯಿತು.
ಹೀಗಾಗಿ ಆತನಿಗೆ ರಾಜ್ಯ ಮಟ್ಟದ ತನಕ ಹೋಗುವ ಅವಕಾಶ ಕೈತಪ್ಪಿತು. ಸರಿಯಾಗಿ ಅಭ್ಯಾಸ ನಡೆಸಲು ಅವಕಾಶ ಸಿಕ್ಕಿದ್ದರೆ ಆತ ಇನ್ನೂ ಹೆಚ್ಚು ಸಾಧನೆ ಮಾಡುತ್ತಿದ್ದ ಅನ್ನುತ್ತಿದ್ದಾರೆ ಆತನ ತಂದೆ ಭವಾನಿ ಕುಮಾರ್ ಕೊಪ್ಪ ಅವರು.