ನ್ಯೂಸ್ ನಾಟೌಟ್: ಇಡೀ ಕೇರಳವನ್ನು ಬೆಚ್ಚಿ ಬೀಳಿಸಿರುವ ಇಬ್ಬರು ಮಹಿಳೆಯರ ನರಬಲಿ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದಲ್ಲದೇ ಪ್ರಾಥಮಿಕ ತನಿಖೆಯ ವರದಿಗಳು ಆಘಾತಕಾರಿ ಅಂಶಗಳನ್ನು ಹೊರಗೆಡುವಿವೆ.
ಮಹಿಳೆಯರನ್ನು ಮಾಟಮಂತ್ರ ಮಾಡಿ ಬಲಿ ಕೊಟ್ಟರೇ ಹಣ ಸಿಗುತ್ತದೆ ಎಂದು ನಂಬಿ, ಬೀದಿ ಬದಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ರೋಸ್ಲಿನ್ ಹಾಗೂ ಪದ್ಮಾ ಎಂಬ ಇಬ್ಬರು ಮಧ್ಯವಯಸ್ಕ ಮಹಿಳೆಯರನ್ನು ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಇತ್ತೀಚೆಗೆ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಭೀಕರ ಘಟನೆ ಕಳೆದ ಮಂಗಳವಾರ ಬೆಳಕಿಗೆ ಬಂದಿತ್ತು.
ಈ ಮಹಿಳೆಯರನ್ನು ಕ್ರೂರವಾಗಿ ಹತ್ಯೆಗೈದ ಆರೋಪದಲ್ಲಿ ಕೊಚ್ಚಿ ಬಳಿಯ ತಿರುವಲ್ಲಾದ ನಿವಾಸಿ ಮಸಾಜ್ ಥೆರಪಿಸ್ಟ್ ಭಾಗವಲ್ ಸಿಂಗ್, ಆತನ ಪತ್ನಿ ಲೈಲಾ ಹಾಗೂ ಪೆರುಂಬವೂರು ಮೂಲದ ರಶೀದ್ ಅಲಿಯಾಸ್ ಮಹಮ್ಮದ್ ಶಫಿ ಎನ್ನುವರನ್ನು ಬಂಧಿಸಲಾಗಿದೆ.ಮಸಾಜ್ ಥೆರಪಿಸ್ಟ್ ಭಾಗವಲ್ ಸಿಂಗ್ ಆಡಳಿತಾರೂಢ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಿಪಿಐ (ಎಂ) ಪಕ್ಷದ ಕಾರ್ಯಕರ್ತ ಎಂದು ತಿಳಿದು ಬಂದಿದೆ. ರಶೀದ್ ಅಲಿಯಾಸ್ ಮಹಮ್ಮದ್ ಶಫಿ ಒಬ್ಬ ವಿಕೃತ ಕಾಮಿಯಾಗಿದ್ದು, ಸೈಕೋಪಾತ್ ಆಗಿದ್ದಾನೆ. ಕೆಲ ವರ್ಷಗಳ ಹಿಂದೆ 56 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಈತ ಭಾಗವಲ್ ಸಿಂಗ್ ಹಾಗೂ ಲೈಲಾ ಅವರ ವಾಮಾಚಾರ ಕೆಲಸಗಳಿಗೆ ಮಹಿಳೆಯನ್ನು ಸರಬರಾಜು ಮಾಡುವಕೆಲಸವನ್ನು ಇತ್ತೀಚೆಗೆ ಶುರುವಿಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 50 ವರ್ಷ ವಯಸ್ಸಿನವರಾದ ಕೊಲೆಯಾದ ಈ ಮಹಿಳೆಯರು ಕಡವಂತಾರ ಮತ್ತು ಕಾಲಡಿ ಗ್ರಾಮದ ನಿವಾಸಿಗಳು ಆಗಿದ್ದರು ಎಂದು ತಿಳಿದು ಬಂದಿದೆ.ರೋಸಲಿನ್ ಹಾಗೂ ಪದ್ಮಾ ಅವರಿಗೆ ಮಹಮ್ಮದ್ ಶಫಿ, ನೀವು ಅಶ್ಲೀಲ ಸಿನಿಮಾಗಳಲ್ಲಿ ಅಭಿನಯಿಸಿದರೇ ನಿಮಗೆ ಕೈ ತುಂಬಾ ದುಡ್ಡು ಕೊಡುತ್ತೇವೆ ಎಂದು ನಂಬಿಸಿ ಅವರನ್ನು ತಮ್ಮ ಉದ್ದೇಶ ತೀರಿಸಿಕೊಳ್ಳಲು ಕರೆದುಕೊಂಡು ಹೋಗಿ ಭಾಗವಲ್ ಸಿಂಗ್ ದಂಪತಿ ಬಳಿ ಬಿಟ್ಟಿದ್ದ.
ಪದ್ಮಾ ಹಾಗೂ ರೋಸಲಿನ್ ಅವರ ಹತ್ಯೆ ಎಷ್ಟೊಂದು ಭೀಕರವಾಗಿತ್ತು ಎನ್ನುವುದನ್ನು ಕಂಡು ಕೇರಳ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಮೂವರು ಹಂತಕ ಆರೋಪಿಗಳು ರೋಸಲಿನ್ನ್ನು ಕತ್ತು ಸೀಳಿ ಕೊಲೆ ಮಾಡಿ ರುಂಡ ಬೇರ್ಪಡಿಸಿ ದೇಹದ ಅಂಗಗಳನ್ನು 56 ತುಂಡುಗಳನ್ನಾಗಿ ಮಾಡಿ ಬೇರೆ ಬೇರೆ ಕಡೆ ಹೂಳಿದ್ದರು. ಪದ್ಮಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಅವಳ ಸ್ತನಗಳನ್ನು ಕತ್ತರಿಸಿ ಬಕೆಟಿನಲ್ಲಿ ರಕ್ತವನ್ನು ತುಂಬಿಸಿಟ್ಟಿದ್ದರು. ಬಳಿಕ ದೇಹವನ್ನು ತುಂಡು ತುಂಡು ಮಾಡಿ ಹೂಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ ಬಳಸಿದ್ದ ಅಸ್ತ್ರಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಆಘಾತಕಾರಿ ಅಂಶ ತಿಳಿಸಿದ್ದಾರೆ. ಕೃತ್ಯದ ಆಯಾಮಗಳನ್ನು ನೋಡಿದರೆ ನರಭಕ್ಷಣೆ ಆದಂತಿದೆ ಎಂದು ಕೊಚ್ಚಿ ಪೊಲೀಸ್ ಕಮಿಷನರ್ ಸಿ.ಎಚ್. ನಾಗರಾಜು ಅವರು ಮಾಧ್ಯಮಗಳಿಗೆ ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಘಟನೆಯ ಬಗ್ಗೆ ಇನ್ನೂ ವಿವರವಾದ ತನಿಖೆ ನಡೆಯಬೇಕಿದೆ. ಸದ್ಯಕ್ಕೆ ಆರೋಪಿಗಳನ್ನು ಬಂಧಿಸಲಾಗಿದ್ದು, ವಾಮಾಚಾರಕ್ಕಾಗಿ ಇದೇ ರೀತಿ ಇವರು ಇನ್ನಷ್ಟು ಮಹಿಳೆಯರನ್ನು ಬಲಿ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ. ಇನ್ನು ಭಾಗವಲ್ ಸಿಂಗ್ ಸಿಪಿಐ (ಎಂ) ಪಕ್ಷದ ಕಾರ್ಯಕರ್ತ ಎಂದು ವಿರೋಧ ಪಕ್ಷಗಳು ಸಿಎಂ ಪಿಣರಾಯಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.