ನ್ಯೂಸ್ ನಾಟೌಟ್ : ಜಗತ್ತಿನಲ್ಲಿ ಕೆಟ್ಟ ತಾಯಿ ಇರಲಿಕ್ಕಿಲ್ಲ ಎಂಬ ಮಾತಿದೆ. ಆದರೆ ಇಲ್ಲೊಬ್ಬಳು ತಾಯಿ ಅದನ್ನು ಸುಳ್ಳಾಗಿಸಿದ್ದಾಳೆ. ಕೇವಲ ಹತ್ತು ದಿನದ ಪುಟ್ಟ ಕಂದಮ್ಮನ ತಾಯಿಯೇ ಬಾವಿಗೆಸೆದು ಕೊಂದ ಕ್ರೂರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಶನಿವಾರ ಸಂಜೆ ನಡೆದಿದೆ.
ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದಿಂದ ವರದಿಯಾಗಿದೆ. ಬಾವಿಗೆಸೆದ ಮಗು ಅಲ್ಲಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಪವಿತ್ರ ಮಗುವಿನ ತಾಯಿ. ಆಕೆ ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಈಕೆ ಮಾನಸಿಕ ಸ್ಥೀಮಿತ ಕಳೆದುಕೊಂಡು ಇಂತಹದ್ದೊಂದು ಅಪರಾಧ ಮಾಡಿದ್ದಾಳೆ ಅನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ನಡೆದಿದೆ. ಈಕೆಗೆ ಇತ್ತೀಚೆಗೆ ಮಾನಸಿಕ ಚಿಕಿತ್ಸಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.