ನ್ಯೂಸ್ ನಾಟೌಟ್: ಗದ್ದೆಯಲ್ಲಿ ದನವನ್ನು ಕಟ್ಟಿ ಹಾಕಲು ಹೋಗುತ್ತಿದ್ದಾಗ ಆಕಸ್ಮತ್ತಾಗಿ ಕಾಲು ಜಾರಿ ಕರೆಗೆ ಬಿದ್ದು ಬಿಕಾಂ ವಿದ್ಯಾರ್ಥಿನಿ ಸಾವಿಗೀಡಾದ ಘಟನೆ ಕೊಡಗಿನ ನಾಪೋಕ್ಲುವಿನ ಕೊಣಂಜಗೇರಿಯ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಂದಾಡು ಗ್ರಾಮದಲ್ಲಿ ನಡೆದಿದೆ.
ಚಸ್ಮಿಕಾ (20) ತಮ್ಮ ಮನೆಯಲ್ಲಿದ್ದ ದನವನ್ನು ಕಟ್ಟಿ ಹಾಕುವುದಕ್ಕಾಗಿ ಬೆಳಗ್ಗೆ ಎದ್ದು ಗದ್ದೆಯ ಕಡೆಗೆ ಹೋಗಿದ್ದಾರೆ. ಆ ವೇಳೆ ದಾರಿ ಮಧ್ಯದಲ್ಲಿ ಆಕಸ್ಮಾತ್ತಾಗಿ ಕಾಲು ಜಾರಿ ಸಮೀಪದಲ್ಲಿದ್ದ ಕರೆಗೆ ಬಿದ್ದಿದ್ದಾರೆ. ಅಲ್ಲಿ ಯಾರು ಇಲ್ಲದ ಕಾರಣ ಮನೆಯವರಿಗೆ ವಿಷಯವೇ ಗೊತ್ತಾಗಲಿಲ್ಲ. ಮಗಳು ಯಾಕೆ ಬರಲಿಲ್ಲ ಎಂದು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಚಸ್ಮಿಕಾ ಪಾರಾಣೆ ಗ್ರಾ.ಪಂ ಸದಸ್ಯೆ ದಾಕ್ಷಾಯಿಣಿ ಹಾಗೂ ಕುಶಾಲಪ್ಪ ಅವರ ಪುತ್ರಿ. ಅವರು ಮೂರ್ನಾಡು ಸರ್ಕಾರಿ ಅನುದಾನಿತ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದರು.
ಮಗಳನ್ನು ಕಳೆ ದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತದೇಹವನ್ನು ಕೆರೆಯಿಂದ ಹೊರತೆಗೆಯಲು ನಾಪೋಕ್ಲುವಿನ ಯುವಕರಾದ ಅಬ್ದುಲ್ ರಜಾಕ್, ಅಬ್ದುಲ್ ಮಜೀದ್ ಹಾಗೂ ಶಮೀರ್ ಸಹಕರಿಸಿದರು. ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಸದಾಶಿವ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.