ನ್ಯೂಸ್ ನಾಟೌಟ್: ಮನುಷ್ಯನಿಗೆ ಆಕ್ಸಿಜನ್ ಅನ್ನುವುದು ಬಹಳ ಮುಖ್ಯ. ಅಂತಹ ಆಕ್ಸಿಜನ್ ಸರಿಯಾದ ಸಮಯಕ್ಕೆ ಸಿಗದಿದ್ದರೆ ಏನಾಗುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಇತ್ತೀಚೆಗೆ ಸರಕಾರಿ ಆಂಬ್ಯುಲೆನ್ಸ್ ನಲ್ಲಿ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕ್ಸಿಜನ್ ಸಿಸ್ಟಮ್ ಕೈ ಕೊಟ್ಟ ಹಿನ್ನೆಲೆಯಲ್ಲಿ ರೋಗಿ ಭಾರಿ ಸಂಕಷ್ಟವನ್ನು ಎದುರಿಸಿದ್ದರು. ಈ ಸಂದರ್ಭದಲ್ಲಿ ಅಮರ ಚಾರಿಟೇಬಲ್ ಟ್ರಸ್ಟ್ ಆಂಬ್ಯುಲೆನ್ಸ್ ವಾಹನ ಸ್ಥಳಕ್ಕೆ ಬಂದು ಸೂಕ್ತ ಸಮಯದಲ್ಲಿ ಆಮ್ಲಜನಕ ಸೇವೆ ಒದಗಿಸಿ ವ್ಯಕ್ತಿಯ ಪ್ರಾಣ ರಕ್ಷಿಸಿದೆ.
ದಿನಾಂಕ 1/10/22ರಂದು ಸಂಜೆ ಕೊಲ್ಲಮೊಗ್ರದಿಂದ ಸುಳ್ಯಕ್ಕೆ ಉಸಿರಾಟದ ತೀವ್ರ ತೊಂದರೆಯಿದ್ದು ಅನಾರೋಗ್ಯ ದಿಂದ ಬಳಲುತ್ತಿದ್ದ ಕೆಂಚಪ್ಪ ಎಂಬವರನ್ನು ಸರಕಾರಿ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಅಳವಡಿಸಿ ಕೊಂಡೊಯ್ಯುದ್ದ ಸಂದರ್ಭದಲ್ಲಿ ಆ ವಾಹನದ ಆಕ್ಸಿಜನ್ ತಾಂತ್ರಿಕ ತೊಂದರೆಗೆ ಒಳಗಾಗಿ ಗುತ್ತಿಗಾರು ತಲುಪುತಿದ್ದಂತೆ ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ಮಾಹಿತಿ ಪಡೆದ ಗುತ್ತಿಗಾರಿನ ಅಮರ ಸೇನಾ ಆಂಬುಲೆನ್ಸ್ ವಾಹನದ ಚಾಲಕರಾದ ಮೋಹನ್ ದಾಸ್ ಶಿರಾಜೆ ಮತ್ತು ರಾಜೇಶ್ ಉತ್ರಂಬೆ ತಕ್ಷಣವೇ ಸ್ಪಂದಿಸಿ ವ್ಯಕ್ತಿ ಸುಳ್ಯ ಆಸ್ಪತ್ರೆಗೆ ತಲುಪಿಸಲು ಯಶಸ್ವಿಯಾಗಿದ್ದು ಈಗ ವ್ಯಕ್ತಿ ಚೇತರಿಕೆಗೊಂಡಿದ್ದಾರೆ. ರಾಜೇಶ್ ಉತ್ರಂಬೆ ವಾಹನ ಚಲಾವಣೆ ಮಾಡಿದರು ಮೋಹನ್ ದಾಸ್ ಶಿರಾಜೆ ಸಹಕರಿಸಿದ್ದರು.