ನ್ಯೂಸ್ ನಾಟೌಟ್ : ಉಬರಡ್ಕ ಗ್ರಾಮ ಪಂಚಾಯತ್ ಗೆ ಸಂಬಂಧಿತ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಭಾರಿ ಹಣದ ದುರುಪಯೋಗದ ವಾಸನೆ ಬರುತ್ತಿದೆ. ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು ಹಾಗೂ ಪಿಡಿಒ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಮೇಲೆಯೇ ಇದೀಗ ಅನುಮಾನ ಬರುತ್ತಿದ್ದು ವೈರಲ್ ಪೋಸ್ಟ್ ಬೆನ್ನತ್ತಿ ನ್ಯೂಸ್ ನಾಟೌಟ್ ಹೊರಟಾಗ ಹಲವಾರು ವಿಚಾರಗಳು, ಸತ್ಯಾಂಶಗಳು ಬಯಲಾಗಿದೆ. ಈ ಕುರಿತ ಸ್ಪೆಶಲ್ ರಿಪೋರ್ಟ್ ಇಲ್ಲಿದೆ ಓದಿ.
ಸಾಮಾಜಿಕ ಜಾಲತಾಣದಲ್ಲಿ ಬೆಳಗ್ಗಿನಿಂದಲೇ ಹರಿದಾಡುತ್ತಿರುವ ಪೋಸ್ಟ್ ನಲ್ಲಿ ಅವ್ಯವಹಾರ, ಹಣದ ಬದಲಾವಣೆಯ ಬಗೆಗಿನ ಗಂಭೀರ ಆರೋಪ ಕೇಳಿ ಬರುತ್ತಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಇತರ ಐದು ಜನ ಸದಸ್ಯರಿಗೆ ಮಾಹಿತಿ ಇಲ್ಲದೆ ೧೫ನೇ ಹಣಕಾಸು ನಿಧಿ ಕ್ರಿಯಾ ಯೋಜನೆ ಬದಲಾವಣೆ ಮಾಡಲಾಗಿದೆ. ಎರಡನೇ ವಾರ್ಡಿನ ಸದಸ್ಯರಿಗೆ ಮಾಹಿತಿ ನೀಡದೆ ರೂ. ೩೦,೦೦೦ ಅನುದಾನ ಕಡಿತ ಮಾಡಲಾಗಿದೆ. ಕಳೆದ ಬಾರಿಯೂ ಇದೇ ರೀತಿ ಮಾಡಲಾಗಿತ್ತು. ಇದರಿಂದ ಭಾರಿ ವ್ಯತ್ಯಾಸ ಕಂಡು ಬಂದಿತ್ತು. ಉಪಾಧ್ಯಕ್ಷರು ಯಾರಿಗೂ ಸ್ಪಂದಿಸುತ್ತಿಲ್ಲ. ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಮಾಹಿತಿ ನೀಡದೆ ಇದನ್ನು ಮಾಡಿ ಮೋಸದಾಟವಾಡುತ್ತಿದ್ದಾರೆ ಎಂದು ಪೋಸ್ಟ್ವೊಂದು ವೈರಲ್ ಆಗಿತ್ತು.
ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಉಬರಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ‘ಬೆಳಗ್ಗೆಯಿಂದ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಚಾರ ಸ್ನೇಹಿತರಿಂದ ತಿಳಿಯಿತು. ನಿಜಕ್ಕೂ ಇದು ನನಗೆ ಶಾಕಿಂಗ್ ವಿಚಾರ. ನನ್ನನ್ನೇ ತಪ್ಪಿತಸ್ಥ ಅನ್ನುವ ರೀತಿಯಲ್ಲಿ ನೋಡಲಾಗುತ್ತಿದೆ. ನನ್ನ ಮೇಲಿನ ಆರೋಪಿತ ವ್ಯಕ್ತಿಯ ವಾರ್ಡ್ ನಲ್ಲಿ ಮಾತ್ರವಲ್ಲ ..ನಮ್ಮ ವಾರ್ಡ್ ನಲ್ಲೂ ಹಣದ ವೆತ್ಯಾಸ ಕಂಡು ಬಂದಿದೆ. ನಮ್ಮ ಮೇಲಿನ ಆರೋಪ ಇದು ಸತ್ಯಕ್ಕೆ ದೂರವಾದ ಮಾತು. ಇದರಲ್ಲಿ ಹುರುಳಿಲ್ಲ. ಎಲ್ಲ ದಾಖಲೆಗಳು ನಮ್ಮ ಬಳಿ ಇದೆ. ನಿಜವಾಗಿಯೂ ಮೋಸದಾಟ ಆಡಿರುವವರು ಯಾರು? ಆ ಸುಳ್ಳನ್ನು ಯಾಕೆ ಹೇಳುತ್ತಿದ್ದಾರೆ ಅನ್ನುವ ವಿಚಾರ ಶೀಘ್ರದಲ್ಲೇ ಜನತೆಯ ಎದುರಿಗೆ ಬರಲಿದೆ’ ಎಂದು ತಿಳಿಸಿದರು.
ಈ ಬಗ್ಗೆ ನ್ಯೂಸ್ ನಾಟೌಟ್ ತಂಡಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಿತ್ರಾವತಿ ಪಾಲಡ್ಕ ಪ್ರತಿಕ್ರಿಯಿಸಿ, ‘ಕ್ರಿಯಾಯೋಜನೆಯ ಸಭೆಯಲ್ಲಿ ಎಲ್ಲರ ಮುಂದೆಯೂ ನಿರ್ಣಯವನ್ನು ಮಂಡಿಸಲಾಯಿತು. ಎಲ್ಲವೂ ಸುಸೂತ್ರವಾಗಿ ನಡೆದು ನಾನು ಪಿಡಿಒ ನೀಡಿದ ಕಡತಕ್ಕೆ ಮೇಲಿಂದ ಮೇಲೆ ನೋಡಿ ಸಹಿ ಹಾಕಿದೆ. ಆದರೆ ಕ್ರಿಯಾ ಯೋಜನೆಯ ಹಣವನ್ನು ಮತ್ತೊಂದು ಕಡೆಗೆ ಬದಲಾವಣೆ ಮಾಡುವುದರ ಕುರಿತು ನನಗೆ ಮಾಹಿತಿ ಇರಲಿಲ್ಲ. ನಾನು ಅದನ್ನು ಓದಿಕೊಂಡಿರಲಿಲ್ಲ. ಪಿಡಿಒ ಅವರು ಹೀಗೆ ಮಾಡುತ್ತಾರೆ, ಹಣವನ್ನು ಮತ್ತೊಂದು ಕಡೆಗೆ ವರ್ಗಾಯಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅವರ ಈ ನಡೆಯೇ ಇಂದು ವಿವಾದಕ್ಕೆ ಕಾರಣವಾಗಿದೆ’ ಎಂದು ತಿಳಿಸಿದರು.
ಈ ಬಗ್ಗೆ ನ್ಯೂಸ್ ನಾಟೌಟ್ ಪಿಡಿಒ ವಿದ್ಯಾಧರ ಅವರನ್ನು ಸಂಪರ್ಕಿಸುವುದಕ್ಕೆ ಪ್ರಯತ್ನ ನಡೆಸಿತು. ದೂರವಾಣಿ ಎತ್ತಿದವರೇ ಮಾಧ್ಯಮದ ಪ್ರತಿನಿಧಿ ಕೇಳುವ ಪ್ರಶ್ನೆಗೆ ತಾಳ್ಮೆಯಿಂದ ಉತ್ತರಿಸುವ ಕೆಲಸವನ್ನೂ ಮಾಡಲಿಲ್ಲ. ಪಂಚಾಯತ್ ಒಳಗಿನವರೇ ಸೇರಿಕೊಂಡು ಈ ರೀತಿಯ ವಿವಾದ ಸೃಷ್ಟಿಸಿದ್ದಾರೆ, ಅಲ್ಲಿ ಏನೂ ಆಗಿಲ್ಲ ಎಂದರು. ಅಧ್ಯಕ್ಷರ ಗಮನಕ್ಕೆ ತಾರದೆ ಅವರ ಸಹಿ ಹಾಕಿಸಿಕೊಂಡು ಹಣದ ಹರಿವನ್ನು ಬೇರೆ ಕಡೆ ನೀವು ಬದಲಾಯಿಸಿದ್ದೀರಾ? ಎಂಬ ಆರೋಪವಿದೆ. ಈ ಬಗ್ಗೆ ಏನು ಹೇಳ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಪಿಡಿಒ, ಏನೋ ಒಂದು ಆರು ಸಾವಿರ ಹಣದ ವ್ಯತ್ಯಯ ಬಂದಿರಬಹುದು..ಅಷ್ಟೇ ಎಂದರು. ಆರು ಸಾವಿರ ಆದರೆ ಏನು.. ಸರಕಾರದ ದುಡ್ಡಲ್ವಾ? ಎಂದು ಪತ್ರಕರ್ತ ಪ್ರಶ್ನಿಸಿದರೆ, ಪಿಡಿಒ ಆತುರದಿಂದ ಕರೆಯನ್ನು ಕಟ್ ಮಾಡಿರುವುದು ವಿಪರ್ಯಾಸವೇ ಸರಿ. ಮಾಧ್ಯಮ ಪ್ರತಿನಿಧಿಗಳ ಜತೆಗೇ ಹೀಗೆ ವರ್ತಿಸಿದವರು ಇನ್ನು ಸಾಮಾನ್ಯ ಜನರ ಜತೆಗೆ ಯಾವ ರೀತಿ ವರ್ತಿಸಬಹುದು ಅನ್ನುವುದು ಕಲ್ಪನೆಗೂ ನಿಲುಕದ ಪ್ರಶ್ನೆಯಾಗಿದೆ.