ನ್ಯೂಸ್ ನಾಟೌಟ್: ಕೇರಳದಲ್ಲಿ ಚಿತ್ರವೊಂದರ ಪ್ರಚಾರಕ್ಕೆ ಮಾಲ್ಗೆ ತೆರಳಿದ್ದ ವೇಳೆ ಅಲ್ಲಿ ನೆರೆದಿದ್ದ ಜನಸಂದಣಿಯಲ್ಲೇ ಇಬ್ಬರು ಮಲಯಾಳಿ ಯುವ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವರದಿಯಾಗಿದೆ.
ಗ್ರೇಸ್ ಅಂಟೋನಿ ಹಾಗೂ ಸಾನ್ಯಾ ಇಯ್ಯಪ್ಪನ್ ಎಂಬ ಇಬ್ಬರು ನಟಿಯರು ಈ ಆರೋಪ ಮಾಡಿದ್ದಾರೆ. ಕೋಯಿಕ್ಕೋಡ್ನ ಹೈಲೈಟ್ ಮಾಲ್ನಲ್ಲಿ ಸಾಟರ್ಡೇ ನೈಟ್ ಸಿನಿಮಾ ಪ್ರಚಾರ ವೇಳೆ ಈ ಘಟನೆ ಇತ್ತೀಚೆಗೆ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ವ್ಯಕ್ತಿಗಳು ನಟಿಯ ಕೈಹಿಡಿದು ಅಸಭ್ಯವಾಗಿ ವರ್ತಿಸುವುದು ವಿಡಿಯೊದಲ್ಲಿ ಕಂಡು ಬಂದಿದೆ. ಆ ಸಂದರ್ಭದಲ್ಲಿ ತಮಗೆ ಆದ ಅನುಭವವನ್ನು ನಟಿಯರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಘಟನೆಯನ್ನು ಖಂಡಿಸಿದ್ದಾರೆ. ಕೆಲ ಅಸಹ್ಯಕರ ವ್ಯಕ್ತಿಗಳು ಜನಸಂದಣಿಯಲ್ಲಿ ತಮ್ಮ ಕೈಯನ್ನು ಹಿಡಿದು ಎಳೆದರು, ಮೈಯನ್ನು ಸವರಲು ನೋಡಿದರು. ಇಂಥವರ ಮೇಲೆ ಸೂಕ್ತ ಕ್ರಮಗಳು ಆಗಬೇಕು ಎಂದು ಆಗ್ರಹಿಸಿದ್ದಾರೆ.