ನ್ಯೂಸ್ ನಾಟೌಟ್: ಕೆಲವೊಂದು ವಿಚಾರಗಳು ಹೃದಯಕ್ಕೆ ಹೆಚ್ಚು ತಟ್ಟುತ್ತದೆ. ಮನುಷ್ಯತ್ವ ಮಾನವೀಯತೆಗೆ ಮಿಗಿಲಾದ ಕಾರ್ಯದ ಸಾರ್ಥಕತೆ, ಸಂಬಂಧವೇ ಇಲ್ಲದ ಒಂದು ಜೀವ ಉಳಿಸುವ ಕೆಲಸಕ್ಕೆ ಸಮಾಜದಲ್ಲಿ ಸಿಗುವ ಮೆಚ್ಚುಗೆ, ಇದೆಲ್ಲದಕ್ಕೂ ಒಂದು ಅರ್ಥವಿದೆ.
ಹೌದು, ಇಂತಹುದೇ ಒಂದು ಮೆಚ್ಚುಗೆಗೆ ಇದೀಗ ಸುಳ್ಯದ ಸೇಂಟ್ ಬ್ರಿಜಿಡ್ಸ್ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾತ್ರವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಇದೀಗ ವೈರಲ್ ಆಗುತ್ತಿದೆ. ಶಿಕ್ಷಕರ ದಿನಾಚರಣೆಯಂದು ಶಿಕ್ಷಕರು ಮಾಡಿದ ಆ ಮಹತ್ಕಾರ್ಯ ಯಾವುದು? ಏನಿದರ ವಿಶೇಷತೆ ಅನ್ನುವುದರ ಬಗೆಗಿನ ವರದಿ ಇಲ್ಲಿದೆ ಓದಿ.
ಗುರು-ಶಿಷ್ಯರ ನಡುವಿನ ಗಟ್ಟಿ ಸಂಬಂಧವನ್ನು ಅರ್ಥಪೂರ್ಣವಾಗಿ ಸಾರುವ ದಿನವೇ ಶಿಕ್ಷಕರ ದಿನಾಚರಣೆ. ಎಲ್ಲ ಶಾಲೆಗಳಲ್ಲಿ ಮಕ್ಕಳು ಶಿಕ್ಷಕರ ದಿನಾಚರಣೆಯಂದು ತಮ್ಮ ನೆಚ್ಚಿನ ಗುರುಗಳಿಗೆ ಹೂವು ನೀಡಿ ಗೌರವಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂದು ಶಿಕ್ಷಕರ ದಿನಾಚರಣೆಯಾಗಿದ್ದು ಎಲ್ಲ ಶಾಲೆಗಳಲ್ಲಿ ಒಂದು ದಿನಕ್ಕೂ ಮೊದಲೇ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗಿದೆ. ಅಂತೆಯೇ ಸೇಂಟ್ ಬ್ರಿಜಿಡ್ಸ್ ಶಾಲೆಯಲ್ಲೂ ಶಿಕ್ಷಕರ ದಿನಾಚರಣೆ ಆಚರಿಸಲಾಗಿದೆ. ಎಲ್ಲ ಶಾಲೆಗಳಿಗಿಂತ ಈ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ವಿಭಿನ್ನವಾಗಿ ಶಿಕ್ಷಕರ ದಿನಾಚರಣೆ ಆಚರಿಸಿಕೊಂಡರು. ಶಿಕ್ಷಣ ಸಂಸ್ಥೆಯಲ್ಲಿ 4 ನೇ ತರಗತಿಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿ ಹಾರ್ದಿಕ್ ಗೆ ಮೂತ್ರ ಪಿಂಡ ಹಾಗೂ ರಕ್ತಕಣಗಳ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ವಿದ್ಯಾರ್ಥಿಗೆ ಚಿಕಿತ್ಸೆ ಗೆ ನೆರವು ನೀಡುವುದಕ್ಕಾಗಿ ಎಲ್ಲ ಶಿಕ್ಷಕರು ಹಣ ಒಟ್ಟುಗೂಡಿಸಿದರು. ಶಿಕ್ಷಕರಿಗೆ ವಿದ್ಯಾರ್ಥಿಗಳು ತರುತ್ತಿದ್ದ ಹೂವಿನ ಬದಲಾಗಿ ಅದರ ಹಣವನ್ನು ಹಾರ್ದಿಕ್ ಗೆ ನೀಡಲು ನಿರ್ಧರಿಸಲಾಯಿತು. ಅದರಂತೆ ಇದೀಗ ಒಟ್ಟು ಎಪ್ಪತ್ತೆರಡು ಸಾವಿರವನ್ನು ಹಾರ್ದಿಕ್ ಮನೆಯವರಿಗೆ ಹಸ್ತಾಂತರಿಸಿದ್ದಾರೆ. ಇಂತಹ ಮಾನವೀಯ ಕಾರ್ಯಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬ್ರಿಜಿಡ್ಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ.ಪಾ.ವಿಕ್ಟರ್ ಡಿಸೋಜ ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪ್ರವೀಣ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಅಂತೋನಿ ಮೇರಿ ಶಿಕ್ಷಕಿಯರಾದ ,ಶ್ರೀಮತಿ ವಲ್ಸ,ಶ್ರೀಮತಿ ಸ್ಮಿತಾ,ಶ್ರೀಮತಿ ಪ್ಲೋಸಿ ಡಿಸೋಜ, ಶ್ರೀಮತಿ ಪಾವನ,ಸಿಸ್ಟರ್ ಮೆಟಿಲ್ಡಾ ಡೆಸಾ,ಸಿಸ್ಟರ್ ಗ್ರೇಸಿ ಡಿಸೋಜ, ಶ್ರೀಮತಿ ಶಾಂತಿ ಡಿಸೋಜ, ಶ್ರೀಮತಿ ಮೇರಿ ಡಿಸೋಜ, ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ಇದ್ದರು.