ನ್ಯೂಸ್ ನಾಟೌಟ್ : ಕಾಗೆ ಗೂಡನ್ನು ನೋಡದವರು ಯಾರೂ ಇಲ್ಲ. ಕಡ್ಡಿಗಳಿಂದ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಹಾಕಿ ಪುಟ್ಟ ಸಂಸಾರ ಮಾಡುವ ಕಾಗೆಗಳ ಲೋಕವೇ ವಿಸ್ಮಯವೆನಿಸುತ್ತದೆ.
ಎಷ್ಟೊಂದು ಬೇಗ ಗೂಡು ಕಟ್ಟುತ್ತದೆ ಎಂದು ಕೆಲವರು ಅಚ್ಚರಿ ಪಡುತ್ತಾರೆ. ಎಲ್ಲ ಕಾಗೆಗಳು ಕಸಕಡ್ಡಿಗಳಿಂದ ಗೂಡು ಕಟ್ಟಿದರೆ ಇಲ್ಲೊಂದು ಮಹಾ ತಂತ್ರಗಾರ್ತಿ ಕಾಗೆ ಕಬ್ಬಿಣದ ತಂತಿಗಳನ್ನು ಬಳಸಿ ಗೂಡು ಕಟ್ಟಿ ಅಚ್ಚರಿ ಮೂಡಿಸಿದೆ. ಈ ದೃಶ್ಯ ಕಂಡು ಬಂದಿರುವುದು ಸುಳ್ಯದ ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಬೆಳೆಸಿದ ಒಂದು ಮರದಲ್ಲಿ. ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದ್ದು ಸ್ಥಳೀಯರನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.
ಈ ಕಾಗೆ ಸೆಂಟ್ರಿಂಗ್ ಕಾಮಗಾರಿಗೆ ಬಳಸುವ ಸಣ್ಣಸಣ್ಣ ಕಬ್ಬಿಣದ ತಂತಿಗಳಿಂದಲೇ ಸಂಪೂರ್ಣವಾಗಿ ತನ್ನ ಗೂಡನ್ನು ಕಟ್ಟಿದೆ. ಅಪಾಯಕಾರಿ ಸ್ಥಿತಿಯಲ್ಲಿದ್ದ ಮರದ ಗೆಲ್ಲನ್ನು ತೆರವುಗೊಳಿಸಲು ಮುಂದಾದಾಗ ಈ ಕೊಂಬೆಯಲ್ಲಿ ಸುಮಾರು ಎರಡು ಕೆಜಿಯಷ್ಟು ಸಣ್ಣಸಣ್ಣ ಕಬ್ಬಿಣದ ತಂತಿಗಳಿಂದಲೇ ಸಂಪೂರ್ಣವಾಗಿ ನಿರ್ಮಾಣವಾಗಿರುವ ಗೂಡೊಂದು ಕಂಡು ಬಂದಿದೆ. ಈ ರೀತಿಯ ಎರಡು ಗೂಡುಗಳು ಕಂಡುಬಂದಿದ್ದು ಒಂದರಲ್ಲಿ ವಾಸವಿದ್ದು ಮತ್ತೊಂದರಲ್ಲಿ ವಾಸ ಮಾಡುತ್ತಿಲ್ಲ.
ಹಿಂದಿನ ದಿನಗಳಲ್ಲಿ ನೋಡುವುದಾದರೆ ಎಲ್ಲರ ಮನೆ ಮುಳಿ ಹುಲ್ಲಿನ ಹಾಗೂ ಇದೀಗ ಹಂಚಿನ ಮನೆಗಳು ಅಲ್ಲಲ್ಲಿ ಕಾಣುತ್ತಿವೆ. ಇದನ್ನು ಹೊರತುಪಡಿಸಿದರೆ ಕಾಂಕ್ರಿಟ್ ಮನೆಗಳೇ ಎಲ್ಲ ಕಡೆ ಕಾಣಿಸುತ್ತದೆ. ಜನರು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. ಅಂತೆಯೇ ಈ ಕಾಗೆ ಕೂಡ ಬರೋಬ್ಬರಿ ೨ ಕೆ.ಜಿ ಕಬ್ಬಿಣದ ಚೂರುಗಳಿಂದ ಮನೆ ಕಟ್ಟಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮರದ ಕಡ್ಡಿಗಳ ಅಲಭ್ಯತೆಯ ಹಿನ್ನೆಲೆಯಲ್ಲಿ ಮತ್ತು ಪದೇ ಪದೇ ಹಾಳಾಗುವ ಕಸ ಕಡ್ಡಿಯ ಗೂಡಿನ ಬದಲು ದೀರ್ಘ ಬಾಳಿಕೆಯ ಕಬ್ಬಿಣದ ತಂತಿಯ ಗೂಡಿಗೆ ಕಾಗೆ ಮಾರುಹೋಗಿರುವುದು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ವಾಸವಿಲ್ಲದ ಕಾಗೆ ಗೂಡನ್ನು ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ವಿದ್ಯಾಸಂಸ್ಥೆಯ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.