ನ್ಯೂಸ್ ನಾಟೌಟ್: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇದೀಗ ಮಿಂಚಿನ ದಾಳಿ ನಡೆಸುತ್ತಿದೆ.
ಸುಳ್ಯ, ಪುತ್ತೂರು, ಉಪ್ಪಿನಂಗಡಿ ಭಾಗದ ಪಿಎಫ್ಐ ಹಾಗೂ ಎಸ್ ಡಿಪಿಐ ಸಂಘಟನೆಗಳ ನಾಯಕರ ಮನೆ ಮೇಲೆ ದಾಳಿ ಮಾಡಿರುವ ಎನ್ ಐಎ ತಂಡ ಮಹತ್ವದ ಮಾಹಿತಿ ಕಲೆ ಹಾಕಿದೆ. ಒಂದು ವರ್ಗದ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿದೆ ಎನ್ನುವುದು ತನಿಖೆಯಲ್ಲಿ ಬಯಲಾಗಿದೆ.
‘ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಸಮಾಜದ ಒಂದು ವರ್ಗದವರಲ್ಲಿ ಭಯ ಉಂಟು
ಮಾಡುವ ಉದ್ದೇಶದಿಂದಲೇ ಯೋಜನೆ ರೂಪಿಸಿ ಪ್ರವೀಣ್ ನೆಟ್ಟಾರು ಅವರ ಈ ಹತ್ಯೆ ನಡೆಸಿದ್ದಾರೆ. ಈ ಹತ್ಯೆ ಭಾರಿ ಸಂಚಿನ ಭಾಗ’ ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.
ಆರೋಪಿಗಳ ಮನೆಯ ಪರಿಸರದಲ್ಲಿ ಹಾಗೂ ಶಂಕಿತರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕೆಲವೊಂದು ಡಿಜಿಟಲ್ ಸಾಧನಗಳು, ಸುಧಾರಿತ ಶಸ್ತ್ರಾಸ್ತ್ರಗಳು\ ಹಳೆಯ ಶಸ್ತ್ರಾಸ್ತ್ರಗಳು, ನಗದು, ಆರೋಪಗಳಿಗೆ ಪೂರಕವಾದ ದಾಖಲೆಗಳು, ಕರಪತ್ರ ಗಳು ಹಾಗೂ ಕೆಲವೊಂದು ಬರಹಗಳಿದ್ದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ತನಿಖೆ ಮುಂದುವರಿಯಲಿದೆ’ ಎಂದು ಎನ್ಐಎ ತಿಳಿಸಿದೆ.