ನ್ಯೂಸ್ ನಾಟೌಟ್: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆ ಚುರುಕುಗೊಂಡಿದೆ. ಇಂದು ಬೆಳ್ಳಂ ಬೆಳಗ್ಗೆ ಸುಳ್ಯದ ನಾವೂರು ಪರಿಸರದಲ್ಲಿ ಎನ್ ಐಎ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದ್ದಾರೆ. ಈಗಾಗಲೇ ವಶದಲ್ಲಿರುವ ಪ್ರಮುಖ ಕೊಲೆ ಆರೋಪಿಯಾದ ಶಿಯಾಬ್ ವಾಸವಾಗಿದ್ದ ಸುಳ್ಯ ನಾವೂರಿನ ಮನೆ ಹಾಗೂ ಸುತ್ತಮುತ್ತಲು ತಪಾಸಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಬೆಳಗ್ಗೆ 5.30 ರ ಹೊತ್ತಿಗೆ ಆರು ವಾಹನಗಳಲ್ಲಿ ಬಂದ ಎನ್.ಐ.ಎ. ಅಧಿಕಾರಿಗಳು, ಕೊಲೆ ಆರೋ ಪಿ ಶಿಯಾಬ್ ಬಾಡಿಗೆಗಿದ್ದ ಮನೆಯಲ್ಲಿತಪಾಸಣೆ ನಡೆಸಿದರು. ಬಳಿಕ ಸುತ್ತಮುತ್ತಲಿನ ಮನೆಯಲ್ಲೂ ವಿಚಾರಣೆ ನಡೆಸಿದರೆಂದು ತಿಳಿದುಬಂದಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಾಲ್ಗೊಂಡಿದ್ದ ಎಲ್ಲ ಹಂತಕರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಸದ್ಯ ಬಂಧಿತರೆಲ್ಲರನ್ನು ಎನ್ಐಎ ತನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ. ಪ್ರವೀಣ್ ಹತ್ಯೆ ಬೆನ್ನಲ್ಲೇ ಈ ಕೊಲೆಯನ್ನು ಸುಪಾರಿ ಹಂತಕರು ಮಾಡಿ ಹೋಗಿದ್ದಾರೆ ಅನ್ನುವಂತಹ ವಿಚಾರ ಚರ್ಚೆಗೆ ಕಾರಣವಾಗಿತ್ತು. ಕೇರಳದಿಂದ ಹಂತಕರು ಬಂದು ಕೊಲೆ ಮಾಡಿದ್ದಾರೆ ಅನ್ನುವ ಮಾಹಿತಿಯಿಂದ ತನಿಖೆ ಆರಂಭಗೊಂಡಿತ್ತು. ಆದರೆ ಈ ಕೊಲೆಯ ಹಿಂದೆ ಕೇರಳದಿಂತ ಬಂದ ತಂಡವಲ್ಲ ಸ್ಥಳೀಯ ಮತಾಂಧ ಶಕ್ತಿಗಳು ಅನ್ನುವುದು ಆನಂತರ ಬೆಳಕಿಗೆ ಬಂದಿತ್ತು. ಕಳಂಜದಲ್ಲಿ ಹತ್ಯೆಯಾದ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಪ್ರವೀಣ್ ಕೊಲೆ ನಡೆದಿದೆ ಅನ್ನುವುದು ತನಿಖೆ ವೇಳೆ ಬಯಲಾಗಿತ್ತು.
==