ನ್ಯೂಸ್ ನಾಟೌಟ್: ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳ ನೀರಿನ ಮಟ್ಟ ಮಂಗಳವಾರ ಸಂಜೆ ಏಕಾಏಕಿ ಏರಿಕೆಯಾಗಿ ನದಿ ತಟದ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.
ನದಿ ಹರಿಯುತ್ತಿರುವ ವಾಸ್ತವ ಪ್ರದೇಶದಲ್ಲಿ ಮಳೆಯೇ ಇಲ್ಲ. ಅಂದರೆ ದಿಡುಪೆ, ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಮುಂಡಾಜೆ, ಕಲ್ಮಂಜ ಮೊದಲಾದ ಗ್ರಾಮಗಳಲ್ಲಿ ಮಳೆ ಇರಲಿಲ್ಲ. ವಾತಾವರಣ ಸಹಜವಾಗಿಯೇ ಇತ್ತು. ಆದರೆ ಸಾಯಂಕಾಲ 4 ಗಂಟೆ ಬಳಿಕ ನದಿಗಳ ನೀರಿನಲ್ಲಿ ವಿಪರೀತ ಏರಿಕೆಯಾಗಿತ್ತು. ಚಾರ್ಮಾಡಿಯಲ್ಲಿ ಸತತ ಮೂರು ಗಂಟೆ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಆ ಕಡೆಯಿಂದ ಹರಿಯುವ ಮೃತ್ಯುಂಜಯ ನದಿಯಲ್ಲಿ ಅತ್ಯಧಿಕ ನೀರು ಹರಿದು ಬಂದಿದೆ. ಈ ವರ್ಷದಲ್ಲಿ ಮೃತ್ಯುಂಜಯ ನದಿಯಲ್ಲಿ ಹರಿದು ಬಂದ ಅತ್ಯಧಿಕ ನೀರು ಇದು ಎಂದು ಹೇಳಲಾಗುತ್ತಿದೆ. ಇನ್ನು ದಿಡುಪೆ ಕಡೆಯಿಂದ ಹರಿಯುವ ನೇತ್ರಾವತಿ ನದಿಯ ಸಂಪರ್ಕ ಹಳ್ಳಗಳಾದ ಕುಕ್ಕಾವಿನ ಏಳೂವರೆ ಹಳ್ಳ ಹಾಗೂ ಕೂಡಬೆಟ್ಟು ಹಳ್ಳಗಳು ಉಕ್ಕಿಹರಿದ ಪರಿಣಾಮ ನೇತ್ರಾವತಿ ನದಿಯ ತಗ್ಗು ಪ್ರದೇಶಗಳಾದ ಕಡಿರುದ್ಯಾವರ, ಕಾನರ್ಪ, ಪರಮುಖ, ನಿಡಿಗಲ್, ಕಾಯರ್ತೋಡಿ ಕುಡೆಂಚಿ ಹಾಗೂ ಮೃತ್ಯುಂಜಯ ಮತ್ತು ನೇತ್ರಾವತಿ ಸಂಗಮ ಸ್ಥಳವಾದ ಪಜಿರಡ್ಕ ಹಾಗೂ ಕೆಳಭಾಗದ ಪರಿಸರಗಳಲ್ಲಿ ನದಿ ನೀರು ಏರಿಕೆಯಾಗಿದೆ. ಈ ಪ್ರದೇಶಗಳ ಅನೇಕ ಅಡಕೆ ತೋಟಗಳಿಗೆ ನೀರು ನುಗ್ಗಿದೆ.