ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಆಯೋಜನೆಗೊಂಡ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಸರಕಾರಿ ಬಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜನ ಸಾಮಾನ್ಯರು, ವಿದ್ಯಾರ್ಥಿಗಳು ಶುಕ್ರವಾರ ವಾಹನ ಸಿಗದೆ ಪರದಾಡಿದ ಘಟನೆ ನಡೆದಿದೆ.
ಜಿಲ್ಲಾಡಳಿತ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮಕ್ಕಳು ಎಂದಿನಂತೆ ರಸ್ತೆಗೆ ಬಂದು ಬಸ್ ಗಾಗಿ ಗಂಟೆಗಟ್ಟಲೆ ಕಾದರೂ ಬಸ್ ಬರಲಿಲ್ಲ. ಈ ಕಾರಣಕ್ಕೆ ಹಲವಾರು ದೂರು ಊರಿನ ಗ್ರಾಮೀಣ ಭಾಗದ ಮಕ್ಕಳು ವಾಪಸ್ ಮನೆಗೆ ತೆರಳುವಂತಾಯಿತು. ಜಿಲ್ಲಾಡಳಿತವೂ ಕನಿಷ್ಟ ಜ್ಞಾನವೂ ಇಲ್ಲದೆ ಇಂತಹ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ ಜನರನ್ನು ಕರೆತರುವುದಕ್ಕಾಗಿ ಸುಮಾರು ಎರಡು ಸಾವಿರಕ್ಕೂ ಅಧಿಕ ಕೆಎಸ್ಆರ್ಟಿಸಿ ಬಸ್ಗಳನ್ನು ಬಾಡಿಗೆಗೆ ನೀಡಲಾಗಿದೆ. ಇಷ್ಟು ಗೊತ್ತಿದ್ದ ಮೇಲೆ ಜಿಲ್ಲಾಡಳಿತ ಮಂಗಳೂರಿನ ಶಾಲೆಗಳಿಗೆ ರಜೆ ನೀಡಿದಂತೆ ಗ್ರಾಮೀಣ ಭಾಗದ ಶಾಲೆಗೂ ರಜೆ ನೀಡಬಹುದಿತ್ತು. ಅಥವಾ ಮುಂಚಿತವಾಗಿ ಮಾಹಿತಿ ನೀಡಬಹುದಿತ್ತು. ಆದರೆ ಯಾವುದನ್ನೂ ಮಾಡದೆ ಜನರು ಹಾಗೂ ವಿದ್ಯಾರ್ಥಿಗಳು ಪರದಾಡುವಂತೆ ಮಾಡಿರುವುದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ.