ನ್ಯೂಸ್ ನಾಟೌಟ್: ಅಂಚೆ ಮೂಲಕ ಬಂದ ಪಾರ್ಸೆಲ್ ಸ್ವೀಕರಿಸಿದ ವ್ಯಕ್ತಿಗೆ ಶಾಕ್ ಆಗಿ ಎದೆ ಸಿಡಿಯುವ ಅನುಭವ ಆದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಮೊಬೈಲ್ ಫೋನ್ ಕಳುಹಿಸುವುದಾಗಿ ಹೇಳಿ ಹಳಸಿದ ತಿಂಡಿಯ ಪೊಟ್ಟಣವನ್ನು ಪಾರ್ಸಲ್ ಕಳುಹಿಸಿ ವಂಚಿಸಿರುವ ವಿಚಾರ ಎಲ್ಲ ಕಡೆ ವೈರಲ್ ಆಗುತ್ತಿದೆ.
ಉಪ್ಪಿನಂಗಡಿಯ ದೇವಸ್ಥಾನವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಭವಾನಿ ಶಂಕರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಪ್ರೀತಿಯ ಕುಟುಂಬ ಸದಸ್ಯರಿಗೆ ಮೂರು ವಿವೋ ಕಂಪನಿಯ ಮೊಬೈಲ್ ಫೋನ್ಗಳನ್ನು ಖರೀದಿಸಿದ್ದರು. ಈ ಬೆನ್ನಲ್ಲೇ ವಿವೋ ದ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕರೆ ಮಾಡಿ ಮೂರು ಮೊಬೈಲ್ ಫೋನ್ ಖರೀದಿಸಿದ್ದಕ್ಕೆ ತಮ್ಮ ಕಂಪನಿಯ ಅದೃಷ್ಟದ ಗ್ರಾಹಕ ಎಂದು ಆಯ್ಕೆಯಾಗಿದ್ದೀರಿ ಹೀಗಾಗಿ 1785 ರೂ.ಗೆ 8800 ರೂ ಮೌಲ್ಯದ ಮೊಬೈಲ್ ಕಳುಹಿಸಲಾಗುವುದು. ಹಣ ತೆತ್ತು ಅಂಚೆ ಕಚೇರಿಯಿಂದ ಪಡೆದುಕೊಳ್ಳಿ’ ಎಂದು ತಿಳಿಸಿದ್ದರು.ತಾನು ಫೋನ್ ಖರೀದಿಸಿದ ಕಾರಣ ಅದೃಷ್ಟ ಒಲಿದಿರುವುದು ನಿಜವಾಗಿರಬಹುದೆಂದು ನಂಬಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ ಅನ್ನು ಹಣ ತೆತ್ತು ಪಡೆದುಕೊಂಡರಲ್ಲದೆ, ಸಂದೇಹ ಬಗೆಹರಿಸಲು ಅಲ್ಲಿಯೇ ಪಾರ್ಸೆಲ್ ಅನ್ನು ತೆರೆದು ನೋಡಿದಾಗ ಕೆಟ್ಟು ಹೋದ ತಿಂಡಿಯ ಪೊಟ್ಟಣವನ್ನು ಪ್ಯಾಕ್ ಮಾಡಿ ಕಳುಹಿಸಿರುವುದು ಕಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ವಂಚಿಸುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಅಂತಹುದರ ಸಾಲಿಗೆ ಈ ಪ್ರಕರಣವೂ ಕೂಡ ಇದೀಗ ಸೇರಿಕೊಂಡಿದೆ.