ನ್ಯೂಸ್ ನಾಟೌಟ್ : ಕೊಳೆತ ಕಾಲಿನ ಭಾಗವನ್ನು ನಗರದ ಮಿಮ್ಸ್ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದು, ಅವರ ಪತ್ನಿ ಭಾಗ್ಯಮ್ಮ ಅವರಿಗೆ ಕೊಟ್ಟು ಮಣ್ಣು ಮಾಡುವಂತೆ ಸೂಚಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ಯಾಂಗ್ರೀನ್ನಿಂದ ಬಳಲುತ್ತಿದ್ದ ಮಂಡ್ಯದ ಕೀಲಾರ ಗ್ರಾಮದ ಪ್ರಕಾಶ್ ಅವರನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಪೂರ್ಣ ಕೊಳೆತಿದ್ದರಿಂದ ಮಂಗಳವಾರ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಕಾಲು ಕತ್ತರಿಸಿದ್ದರು. ನಂತರ ಅದನ್ನು ನಿಯಮಾನುಸಾರ ವಿಲೇವಾರಿ ಮಾಡದೆ, ಭಾಗ್ಯಮ್ಮ ಅವರಿಗೆ ನೀಡಿದ್ದರು.
ಅದರಿಂದ ಆಘಾತಕ್ಕೆ ಒಳಗಾದ ಭಾಗ್ಯಮ್ಮ ಆಸ್ಪತ್ರೆ ಮುಂಭಾಗ, ಗಂಡನ ಕತ್ತರಿಸಿದ ಕಾಲನ್ನು ಹಿಡಿದು ಕಣ್ಣೀರು ಹಾಕುತ್ತಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ, ರೋಗಿಯ ಮೊಣಕಾಲಿನ ಕೆಳ ಭಾಗವನ್ನು ತೆಗೆಯಲಾಗಿತ್ತು. ಅದನ್ನು ಡಿ ದರ್ಜೆ ನೌಕರರು ರೋಗಿಯ ಸಂಬಂಧಿಕರಿಗೆ ಕೊಟ್ಟಿದ್ದಾರೆ. ವಿಷಯ ಗಮನಕ್ಕೆ ಬಂದ ಕೂಡಲೇ, ಅದನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದರು.