ನ್ಯೂಸ್ ನಾಟೌಟ್: ‘ಮಂಜಿನ ನಗರಿ’ ಮಡಿಕೇರಿಯ ದಸರಾ ಮಹೋತ್ಸವಕ್ಕೆ ಸೋಮವಾರ ವಿಜೃಂಭಣೆಯ ಕರಗೋತ್ಸವ ಮುನ್ನುಡಿ ಬರೆಯಿತು.
ಪಡುವಣದಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಇಲ್ಲಿನ ಪಂಪಿನ ಕೆರೆಯ ಆವರಣದಲ್ಲಿ ನಗರದ ನಾಲ್ಕು ಶಕ್ತಿ ದೇವತೆಗಳಾದ ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮನ ಕರಗೋತ್ಸವದ ನಗರ ಪ್ರದಕ್ಷಿಣೆಗೆ ಹೊರಟವು. ಮಹದೇವಪೇಟೆಯ ಮೂಲಕ ಪೇಟೆ ಶ್ರೀರಾಮಮಂದಿರ ತಲುಪಿದ ನಾಲ್ಕು ಕರಗಗಳಿಗೆ ದಾರಿಯುದ್ದಕ್ಕೂ ಜನರು ಪೂಜೆ ಸಲ್ಲಿಸಿದರು. ಹಲವು ಬಗೆಯ ಕಲಾತಂಡಗಳೂ ಮೆರವಣಿಗೆಯಲ್ಲಿ ಭಾಗಿಯಾದವು. ಮಂಗಳವಾದ್ಯಗಳ ನಿನಾದಕ್ಕೆ ಕರಗಧಾರಿಗಳು ಹೆಜ್ಜೆ ಹಾಕಿದರು. ಇದಕ್ಕೂ ಮುನ್ನ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಅವರು ಕರಗೋತ್ಸವಕ್ಕೆ ಚಾಲನೆ ನೀಡಿದರು.