ನ್ಯೂಸ್ ನಾಟೌಟ್ : ಮಳೆಯ ಆರ್ಭಟದಿಂದಾಗಿ ಅಲ್ಲಲ್ಲಿ ಬೆಟ್ಟ ಗುಡ್ಡಗಳು ಕುಸಿದು ಬಿದ್ದು ಹಾನಿ ಸಂಭವಿಸಿದ ಘಟನೆಯ ವರದಿಯನ್ನು ನಾವೆಲ್ಲ ಓದಿದ್ದೇವೆ.ಇತ್ತೀಚೆಗೆ ಮನೆ ಮೇಲೆ ಗುಡ್ಡ ಕುಸಿದು ಬಿದ್ದು ಇಬ್ಬರು ಹೆಣ್ಮಕ್ಕಳು ಪ್ರಾಣ ಬಿಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದಿಂದ ವರದಿಯಾಗಿತ್ತು. ಈ ಘಟನೆ ಮಾಸುವ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಲ್ನಾಡು ಗ್ರಾಮದಲ್ಲಿ ರಾತ್ರಿ ವೇಳೆ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದೆ.
ಅದೃಷ್ಟವಶಾತ್ ಇಬ್ಬರು ಹೆಣ್ಮಕ್ಕಳು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಸಾರ್ಯ ಅಬರೆಗುರಿ ನಿವಾಸಿ ವಿಶ್ವನಾಥ ರೈ ಎಂಬವರಿಗೆ ಮನೆಯಾಗಿದ್ದು, ಅದರೊಳಗಿದ್ದ ವಸ್ತುಗಳು ಮಣ್ಣಿನಡಿಯಲ್ಲಿ ಸಿಲುಕಿವೆ. ಕೂಲಿ ಕೆಲಸ ಮಾಡುತ್ತಾ ಜೀವನ ನಿರ್ವಹಿಸುತ್ತಿದ್ದ ಈ ಮನೆಯಲ್ಲಿ ವಿಶ್ವನಾಥ ರೈ ,ಪತ್ನಿ ಹಾಗೂ ಇಬ್ಬರು ಹೆಣ್ಮಕ್ಕಳು ವಾಸವಿದ್ದರು. ಎಂದಿನಂತೆ ಕೂಲಿ ಕೆಲಸ ಮಾಡಿ ಮನೆಗೆ ವಾಪಾಸ್ಸಾಗಿದ್ದು ಅದೇ ದಿನ ರಾತ್ರಿ ಒಂದೂವರೆ ಗಂಟೆಗೆ ಇದ್ದಕ್ಕಿದ್ದಂತೆ ಭಾರಿ ಮಳೆ ಸುರಿಯಲಾರಂಭಿಸಿದೆ. ಪರಿಣಾಮ ಮನೆಯ ಹಿಂಬದಿಯಲ್ಲಿದ್ದ ಗುಡ್ಡ ಜರಿದು ಮನೆ ಮೇಲೆ ಬಿದ್ದಿದೆ. ಮನೆ ಕುಸಿಯುತ್ತಿದ್ದ ಶಬ್ದ ಕೇಳಿ ಮನೆಯೊಳಗಿದ್ದವರು ಹೊರಗೆ ಓಡಿ ಬರುವ ಪ್ರಯತ್ನದಲ್ಲಿ ವಿಶ್ವನಾಥ ರೈಯವರ ಇಬ್ಬರು ಪುತ್ರಿಯರಿಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಸಂಬಂಧಿಕರ ಮನೆಯಲ್ಲಿ ತಾತ್ಕಾಲಿಕವಾಗಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೆ ಈ ಕುಟುಂಬಕ್ಕೆ ವಾಸಕ್ಕೆ ಯೋಗ್ಯವಾದ ಸೂರು ಇಲ್ಲದಿರುವುದರಿಂದ ಶಾಶ್ವತವಾದ ಸೂರಿನ ವ್ಯವಸ್ಥೆ ಆಗಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.