ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಹರಿಹರ-ಪಲ್ಲತ್ತಡ್ಕದಲ್ಲಿ ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ಒಂದು ಹಂತದಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ತಿರುಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಘಟನೆ ಗುರುವಾರ ನಡೆದಿದೆ.
ಮದ್ಯ ಮುಕ್ತ ಗ್ರಾಮವಾಗಬೇಕು. ಇಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ಅವಕಾಶ ನೀಡಬಾರದು ಎಂದು ಸಂಘಟನೆಗಳ ಹಲವಾರು ಮಂದಿ ಕಾರ್ಯಕರ್ತರು ಹರಿಹರ ಮುಖ್ಯ ಪೇಟೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಪ್ರತಿಭಟನೆಯ ವಿಡಿಯೋ ಮಾಡುತ್ತಿದ್ದನ್ನು ಗಮನಿಸಿ ಪ್ರತಿಭಟನಾ ನಿರತರು ಆತನ ವಿರುದ್ಧ ಸಿಡಿದೆದ್ದರು. ಈ ವೇಳೆ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡರು. ಅಷ್ಟಕ್ಕೆ ಸುಮ್ಮನಾಗದ ಪ್ರತಿಭಟನಾ ನಿರತರು ಆತನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾದರು. ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.