ನ್ಯೂಸ್ ನಾಟೌಟ್ : ಬೆಳ್ಳಂ ಬೆಳಗ್ಗೆ ಭಾರಿ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದಲ್ಲಿ ಇಂದು (ಶುಕ್ರವಾರ) ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ರಮುಲಾ ಬ್ಯಾರಿ ಎನ್ನುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ ಎಂದು ನ್ಯೂಸ್ ನಾಟೌಟ್ ಗೆ ಮಾಹಿತಿ ತಿಳಿದು ಬಂದಿದೆ. ಗೋಳಿತೊಟ್ಟಿನಲ್ಲಿ ಬಹಳಷ್ಟು ವರ್ಷಗಳಿಂದ ಇರುವ ರಮುಲಾ ಬ್ಯಾರಿ ಅವರು ತಮ್ಮ ಮಗ ಪುತ್ತು ಬ್ಯಾರಿ ಜತೆಗೆ ನೆಲೆಸಿದ್ದರು. ಮಗ ವಿದೇಶಕ್ಕೆ ಹೋಗಿದ್ದರು. ಶುಕ್ರವಾರ ಬೆಳಗ್ಗೆ ಅವರು ಮಂಗಳೂರಿನ ಬಜಪೆ ವಿಮಾನ ನಿಲ್ದಾಣಕ್ಕೆ ಬರುವವರಿದ್ದರು. ಹೀಗಾಗಿ ಅವರನ್ನು ಕರೆದುಕೊಂಡು ಬರಲು ಮನೆ ಮಂದಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ಸಮಯವನ್ನೇ ಹೊಂಚು ಹಾಕಿ ಕುಳಿತಿದ್ದ ಕಳ್ಳರು ಮನೆಯ ಬಾಗಿಲು ಮುರಿದು ೨೦ ಪವನ್ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ . ಸದ್ಯ ಮನೆಯವರು ವಾಪಸ್ ಬಂದಾಗ ಅಂದಾಜು ಎಂಟು ಲಕ್ಷ ರೂ. ಮೌಲ್ಯದ ಚಿನ್ನ ಕದ್ದು ಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
.