ನ್ಯೂಸ್ ನಾಟೌಟ್ : ತಮ್ಮ ಮಕ್ಕಳನ್ನು ತಾವೇ ಅಪಹರಿಸಿ ಪೊಲೀಸ್ ಠಾಣೆಗೆ ದೂರು ನೀಡುವುದನ್ನು ಎಲ್ಲಿಯಾದರು ನೋಡಿದ್ದೀರಾ? ಇದು ನಂಬಲು ಸಾಧ್ಯವಾಗದ ವಿಚಾರವಾದರೂ ನಮ್ಮ ಕರಾವಳಿಯಲ್ಲಿ ಇಂತಹದ್ದೊಂದು ಘಟನೆ ಈಗ ನಡೆದು ಬಿಟ್ಟಿದೆ ಅನ್ನುವುದು ವಿಶೇಷ.
ಮೂಲ್ಕಿಯ ಕಾರ್ನಾಡು ಶಾಲೆಗೆ ತೆರಳಿದ್ದ ಒಂಬತ್ತು ವರ್ಷದ ಬಾಲಕ ದಿಢೀರ್ ನಾಪತ್ತೆಯಾಗಿ ಶಾಲೆಯಲ್ಲಿ ಹಾಗೂ ಮನೆಯಲ್ಲಿ ಆತಂಕದ ಸ್ಥಿತಿ ನಿನ್ನೆ (ಶುಕ್ರವಾರ) ನಿರ್ಮಾಣವಾಗಿತ್ತು. ಈ ನಡುವೆ ತನ್ನ ಮಗು ಎಲ್ಲಿ ಎಂದು ಶಾಲೆಯಲ್ಲಿ ಶಿಕ್ಷಕರನ್ನು ಅಪ್ಪ ಪ್ರಶ್ನಿಸಿದ್ದಾನೆ. ಮಗು ಶಾಲೆಗೆ ಬಂದಿಲ್ಲ ಎಂದು ಶಿಕ್ಷಕರು ಹೇಳಿದಾಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಂದೆಯೇ ನಾಲ್ಕನೇ ತರಗತಿಯ ಬಾಲಕನನ್ನು ಅಪಹರಿಸಿ ನವರಂಗಿ ನಾಟಕವಾಡಿದ್ದು ಬಯಲಾಗಿತ್ತು. ಪ್ರತಿ ದಿನ ಶಾಲೆಗೆ ಬಸ್ ನಲ್ಲಿ ಬರುತ್ತಿದ್ದ ಬಾಲಕ ಎಂದಿನಂತೆ ಬಸ್ ನಲ್ಲಿ ಬಂದಿದ್ದಾನೆ.
ಶಾಲೆ ಸಮೀಪ ಬಸ್ ನಿಂದ ಇಳಿದ ತಕ್ಷಣ ಆಟೋದಲ್ಲಿ ಸ್ಥಳಕ್ಕೆ ಬಂದ ತಂದೆ ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ಅಪ್ಪ ಹರೀಶನ ನಾಟಕವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗುವನ್ನು ಅಪಹರಿಸಿದ ತಂದೆ ತನ್ನ ಸ್ನೇಹಿತನ ಮನೆಯಲ್ಲಿ ಇರಿಸಿದ್ದ ಅನ್ನುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಕೊನೆಗೆ ತನ್ನ ತಪ್ಪನ್ನು ತಂದೆ ಒಪ್ಪಿಕೊಂಡಿದ್ದಾನೆ. ಆದರೆ ಈತ ಯಾವ ಕಾರಣಕ್ಕೆ ಸ್ವಂತ ಮಗುವನ್ನು ಅಪಹರಿಸಿದ ಅನ್ನುವ ವಿಚಾರ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.