ನ್ಯೂಸ್ ನಾಟೌಟ್ : ವಾಹನ ಚಾಲನಾ ಪರವಾನಗಿ ಪಡೆಯುವ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯಾಗಿದೆ. ಮೊದಲಾದರೆ ಲೈಸೆನ್ಸ್ ಪಡೆಯಲು ಹರಸಾಹಸವನ್ನೇ ಮಾಡಬೇಕಿತ್ತು. ಈಗ ಕೇಂದ್ರ ಸಾರಿಗೆ ಇಲಾಖೆ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಿದೆ.
ಹೊಸ ವ್ಯವಸ್ಥೆಯ ಅಡಿಯಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಆರ್ಟಿಒ ಕಚೇರಿಗೆ ಅಲೆದಾಡುವ ಅಗತ್ಯ ಬೀಳುವುದಿಲ್ಲ. ಉದ್ದುದ್ದ ಕ್ಯೂನಲ್ಲಿ ನಿಂತು ಹೈರಾಣಗೊಳ್ಳುವ ಪ್ರಮೇಯ ಬರುವುದಿಲ್ಲ. ಲೈಸೆನ್ಸ್ ಪಡೆಯಲು ನೀವು ಆರ್ಟಿಒ ಅಧಿಕಾರಿಗಳ ಬಳಿ ಹೋಗಿ ನೀವು ವಾಹನ ಚಾಲನಾ ಪರೀಕ್ಷೆ ಎದುರಿಸಬೇಕಾಗಿಲ್ಲ. ಬಹಳ ಸುಗಮವಾಗಿ ಮತ್ತು ಸರಳವಾಗಿ ನಿಮಗೆ ವಾಹನ ಪರವಾನಗಿ ಸಿಗುವ ರೀತಿಯಲ್ಲಿ ಹೊಸ ನಿಯಮಗಳನ್ನು ತರಲಾಗಿದೆ.
ವಾಹನ ಚಾಲನಾ ತರಬೇತಿ ಕೇಂದ್ರಗಳ ಬಗ್ಗೆ ಕೇಂದ್ರ ಸಾರಿಗೆ ಇಲಾಖೆ ಕೆಲ ಮಾರ್ಗಸೂಚಿಗಳನ್ನು ನೀಡಿದೆ. ಅದರಲ್ಲಿ ತರಬೇತಿ ಶಾಲೆಗಳ ಗಾತ್ರ, ತರಬೇತಿದಾರರ ವಿದ್ಯಾರ್ಹತೆ, ತರಬೇತಿ ಅವಧಿ, ತರಬೇತಿ ಪಠ್ಯಕ್ರಮ ಇತ್ಯಾದಿ ಅನೇಕ ಅಂಶಗಳಿವೆ. ಕೆಲ ಮುಖ್ಯ ಅಂಶಗಳು ಇಲ್ಲಿ ಕೆಳಕಾಣಿಸಿದಂತಿವೆ.
- ದ್ವಿಚಕ್ರ, ತ್ರಿಚಕ್ರ ಮತ್ತು ಲಘು ವಾಹನಗಳ ಚಾಲನೆಯ ತರಬೇತಿ ನೀಡುವ ಡ್ರೈವಿಂಗ್ ಸ್ಕೂಲ್ ಕನಿಷ್ಠ 1 ಎಕರೆ ಪ್ರದೇಶ ಹೊಂದಿರಬೇಕು.
- ಮಧ್ಯಮ ಮತ್ತು ಭಾರೀ ಗಾತ್ರದ ವಾಹನಗಳ ಚಾಲನಾ ತರಬೇತಿ ಶಾಲೆ ಎರಡು ಎಕರೆ ಪ್ರದೇಶ ಜಾಗ ಹೊಂದಿರಬೇಕು.
- ತರಬೇತಿ ನೀಡುವ ವ್ಯಕ್ತಿ ಕನಿಷ್ಠ 12ನೇ ತರಗತಿ ಪಾಸ್ ಆಗಿರಬೇಕು. ವಾಹನ ಚಾಲನೆಯಲ್ಲಿ ಐದು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರಬೇಕು. ಎಲ್ಲಾ ಟ್ರಾಫಿಕ್ ನಿಯಮಗಳನ್ನು ತಿಳಿದುಕೊಂಡಿರಬೇಕು.
- ಲಘು ಮೋಟಾರು ವಾಹನಗಳ ತರಬೇತಿ ಅವಧಿ 4 ವಾರ ಅಥವಾ 29 ಗಂಟೆಯವರೆಗೆ ಇರಬೇಕು. ತರಬೇತಿಯಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್ ವಿಭಾಗ ಇರಬೇಕು.
- ತರಬೇತಿಯಲ್ಲಿ ಅಭ್ಯರ್ಥಿಗಳಿಗೆ 21 ಗಂಟೆ ಕಾಲ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ವಾಹನ ಚಲಾಯಿಸುವ ಅವಕಾಶ ನೀಡಿ ಕಲಿಸಬೇಕು. ಮಾಮೂಲಿಯ ರಸ್ತೆ, ಕಚ್ಛಾ ರಸ್ತೆ, ಹೆದ್ದಾರಿ, ನಗರ ರಸ್ತೆಗಳಲ್ಲಿ ತರಬೇತಿ ನೀಡಬೇಕು. ವಾಹನ ಹಿಂದಕ್ಕೆ ತಿರುಗಿಸುವುದು, ಪಾರ್ಕಿಂಗ್ ಮಾಡುವುದು, ಎತ್ತರದ ರಸ್ತೆಯಲ್ಲಿ ಚಲಾಯಿಸುವುದು, ತಗ್ಗಿನಲ್ಲಿ ಇಳಿಸುವುದು ಇತ್ಯಾದಿ ಚಾಲನಾ ಕಲೆಗಳನ್ನು ಕಲಿಸಿಕೊಡಬೇಕು.
- ಥಿಯರಿ 8 ಗಂಟೆ ಇರಬೇಕು. ಇದರಲ್ಲಿ ರಸ್ತೆ ನಿಯಮ, ರಸ್ತೆ ಅಪಘಾತ, ಪ್ರಥಮ ಚಿಕಿತ್ಸೆ ಇತ್ಯಾದಿ ವಿಚಾರಗಳನ್ನು ಕಲಿಸಿಕೊಡಬೇಕು.