ನ್ಯೂಸ್ ನಾಟೌಟ್: ಬಿಪಿನ್ ರಾವತ್ ಅಕಾಲಿಕ ಸಾವಿನ ಬಳಿಕ ತೆರವಾಗಿದ್ದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಅಥವಾ ಸಿಡಿಎಸ್ ಹುದ್ದೆಗೆ ಕೇಂದ್ರ ಸರ್ಕಾರ ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.ಅದರೊಂದಿಗೆ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಮಿಲಿಟರಿ ವ್ಯವಹಾರಗಳ ಇಲಾಖೆಯ ಕೇಂದ್ರ ಸರ್ಕಾರದ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ಮುಂದಿನ ಆದೇಶದವರೆಗೂ ಅವರು ಈ ಎರಡು ಸ್ಥಾನಗಳಲ್ಲಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ. ಸುಮಾರು 40 ವರ್ಷಗಳ ವೃತ್ತಿಜೀವನದಲ್ಲಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು ಹಲವಾರು ಕಮಾಂಡ್, ಸಿಬ್ಬಂದಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅದಲ್ಲದೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯನ್ನೂ ನಡೆಸುವ ಮೂಲಕ ಈ ಭಾಗದ ಗರಿಷ್ಠ ಅನುಭವವನ್ನು ಹೊಂದಿದ್ದಾರೆ. ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ್ ಯುದ್ಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್ ಗೌರವವನ್ನೂ ಪಡೆದುಕೊಂಡ ವ್ಯಕ್ತಿಯಾಗಿದ್ದಾರೆ.