ನ್ಯೂಸ್ ನಾಟೌಟ್: ಕೇವಲ 100 ರು.ಗೆ 2 ಕೆ.ಜಿ ಬಂಗುಡೆ ಸಿಗುತ್ತಿದ್ದು ಚೆನ್ನಾಗಿ ಉಂಡು ತಿಂದು ಕುಣಿದು ಕುಪ್ಪಳಿಸಬೇಕು ಎಂದು ಮನಸಲ್ಲೇ ಮಂಡಿಗೆ ತಿನ್ನುತ್ತಿರುವ ಮೀನು ಖಾದ್ಯ ಪ್ರಿಯರಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಮೀನು ಕಡಿಮೆ ಬೆಲೆಗೆ ಸಿಕ್ಕಿದರೂ ಅದರ ಸಾರಿಗೆ ಕಡಿಯುವ ಮೆಣಸಿನ ದರ ಒಂದೇ ಸಮನೆ ಗಗನದೆತ್ತರಕ್ಕೆ ಏರಿದೆ. ಈ ದರವನ್ನು ನೋಡಿದರೆ ಮೀನು ಸಾರು ಸವಿಯುವವರ ಬಾಯಲ್ಲಿ ಈಗ ವಿಪರೀತ ಉರಿ ಶುರುವಾಗುವುದಂತೂ ಗ್ಯಾರಂಟಿ ಅನ್ನುತ್ತಿದ್ದಾರೆ ಮೀನು ಮಾರುಕಟ್ಟೆಯ ಪಂಡಿತರು..!, ಮೂರು ವಾರಗಳ ಹಿಂದೆ ಮೀನು ಸಾರಿಗೆ ಕಡೆಯುವ ಕುಮ್ಟೆ ಮೆಣಸಿನ ದರ ಕೆ.ಜಿಗೆ 400 ರು. ತನಕ ಇತ್ತು. ಇದೀಗ ಕುಮ್ಟೆ ಮೆಣಸಿನ ದರ ಕೆ.ಜಿಗೆ 530 ರು. ತನಕ ಏರಿದೆ. ಅಂದರೆ ಕೇವಲ 3 ವಾರಗಳಲ್ಲಿ ಮೆಣಸಿನ ದರ 130 ರು. ಏರಿಕೆ ಕಂಡಿರುವುದು ವಿಶೇಷವಾಗಿದೆ.
ಒಂದು ಅಂದಾಜಿನ ಪ್ರಕಾರ ಮೀನಿನ ದರದಲ್ಲಿ ಇಳಿಕೆ ಕಂಡ ಬಳಿಕವೇ ಕುಮ್ಟೆ ಮೆಣಸಿನ ದರ ಏರಿಕೆ ಕಂಡಿದೆ ಅನ್ನುವಂತಹ ಚರ್ಚೆಗಳು ಕೂಡ ನಡೆಯುತ್ತಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ತಂಡದ ಜತೆಗೆ ಸುಳ್ಯ, ಉಪ್ಪಿನಂಗಡಿ, ನೆಲ್ಯಾಡಿ ಹಾಗೂ ಬೆಳ್ತಂಗಡಿಯ ಅಂಗಡಿ ಮಾಲೀಕರು ಪ್ರತಿಕ್ರಿಯಿಸಿದ್ದು ಏರುತ್ತಿರುವ ಮೆಣಸಿನ ದರ ಮತ್ತಷ್ಟು ಏರುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ. ಹೀಗೆಯೇ ಮೆಣಸಿನ ದರ ಏರಿಕೆಯಾಗುತ್ತಲೇ ಹೋದರೆ ಬಂಗುಡೆಯಲ್ಲಿ ಉಳಿಸಿದ್ದು ಮೆಣಸಿನಲ್ಲಿ ಹೋದಂತಾಗುತ್ತದೆ ಅನ್ನುವ ಜೋಕ್ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.