ನ್ಯೂಸ್ ನಾಟೌಟ್: ಮೀನುಗಾರರಿಗೆ ಈಗ ಸುಗ್ಗಿಯ ಕಾಲ. ಸಮುದ್ರದಲ್ಲಿ ಬೇಕಾದಷ್ಟು ಮೀನುಗಳು ಸಿಗುವ ಸಮಯ, ಇದರಿಂದಲೇ ಏನೋ ಗೊತ್ತಿಲ್ಲ, ಉಪ್ಪಿನಂಗಡಿಯ ಸಮೀಪದಲ್ಲಿರುವ ಕಲ್ಲೇರಿ ಅನ್ನುವ ಸ್ಥಳದಲ್ಲಿ ಕೇವಲ 50 ರೂ.ವಿಗೆ ಬರೋಬ್ಬರಿ 1 ಕೆ.ಜಿ ಬಂಗುಡೆ ಮೀನು ಸಿಗುತ್ತಿದೆ. ಅಗ್ಗದ ದರದಲ್ಲಿ ಬಂಗುಡೆ ಸಿಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಕಲ್ಲೇರಿಯ ಮೀನಿನ ಅಂಗಡಿಯಲ್ಲಿ ಮೀನು ಖರೀದಿಸುವುದಕ್ಕೆ ಜನ ಮುಗಿಬಿದ್ದಿದ್ದಾರೆ. ವಾಹನ ದಟ್ಟಣೆ ಹೆಚ್ಚಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯೂ ಉಂಟಾಗಿದೆ. ಉಪ್ಪಿನಂಗಡಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳ ಅಂಗಡಿ ಇದ್ದರೂ ಕಲ್ಲೇರಿಗೆ ಉಪ್ಪಿನಂಗಡಿ ಹಾಗೂ ಸುತ್ತಮುತ್ತಲಿನ ಜನ ಏಕೆ ಹೋದರು? ಎನ್ನುವ ಪ್ರಶ್ನೆ ಎದುರಾಯಿತು. ಈ ಬಗ್ಗೆ ನ್ಯೂಸ್ ನಾಟೌಟ್ ತಂಡ ಮಾಹಿತಿ ಕಲೆ ಹಾಕಿದಾಗ ಅಚ್ಚರಿಯ ವಿಷಯ ಹೊರಬಿತ್ತು.
ಯಾವಾಗಲೂ ಉಪ್ಪಿನಂಗಡಿಯಲ್ಲಿ ಮೀನು ಮಾರಾಟ ಮಾಡುತ್ತಿರುವ ಅಂಗಡಿಯಲ್ಲಿ 1 ಕೆ.ಜಿ ಬಂಗುಡೆ ಮೀನಿನ ಬೆಲೆ 250 ರೂ. ಆಗಿತ್ತು. ಎಂದಿನ ದರದಲ್ಲಿಯೇ ಅಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಉಪ್ಪಿನಂಗಡಿಯಿಂದ ಕೇವಲ ಐದಾರು ಕಿ.ಮೀ. ದೂರ ಇರುವ ಕಲ್ಲೇರಿಯಲ್ಲಿ ಕೇವಲ 50 ರೂ.ವಿಗೆ 1 ಕೆ.ಜಿ ಬಂಗುಡೆ ದೊರೆಯುತ್ತಿತ್ತು. ಈ ಸುದ್ದಿ ಹರಿದಾಡುತ್ತಿದ್ದಂತೆ ಉಪ್ಪಿನಂಗಡಿಯಲ್ಲಿ ಮೀನು ಖರೀದಿಸುವುದಕ್ಕೆ ಮುಂದಾಗದೆ ನೇರವಾಗಿ ತಮ್ಮ ವಾಹನಗಳನ್ನು ಹತ್ತಿಕೊಂಡು ಜನ ಕಲ್ಲೇರಿಯತ್ತ ಹೋಗಿದ್ದಾರೆ. ತಮಗೆ ಬೇಕಾದಷ್ಟು ಮೀನನ್ನು ಕಡಿಮೆ ದರಕ್ಕೆ ಖರೀದಿಸಿಕೊಂಡು ಬಂದಿದ್ದಾರೆ. ನ್ಯೂಸ್ ನಾಟೌಟ್ ತಂಡಕ್ಕೆ ಸಿಕ್ಕಿದ ಮಾಹಿತಿ ಪ್ರಕಾರ ಕಳೆದ ಮೂರು ದಿನಗಳಿಂದ ಇದೇ ರೀತಿಯಲ್ಲಿ ಕಲ್ಲೇರಿಯಲ್ಲಿ ಕಡಿಮೆ ದರಕ್ಕೆ ಮೀನು ಸಿಗುತ್ತಿದೆ ಎಂದು ಹೇಳಲಾಗುತ್ತಿದೆ.