ನ್ಯೂಸ್ ನಾಟೌಟ್: ಮಳೆರಾಯನ ರಣಾರ್ಭಟ ಸತತ ಮೂರನೇ ದಿನವೂ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಜನರನ್ನು ಸ್ಥಳೀಯ ಆಡಳಿತ ಸುರಕ್ಷಿತ ತಾಣಗಳಿಗೆ ಕಳಿಸಿಕೊಟ್ಟಿದೆ.
ಈಗಾಗಲೇ ಕೊಡಗು ಜಿಲ್ಲೆಯ ಮದೆನಾಡು, ದೇವರಕೊಲ್ಲಿ, ಕೊಯನಾಡು, ಕೊಡಗು ಸಂಪಾಜೆ, ಚೆಂಬು, ಪೆರಾಜೆ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಪಯಸ್ವಿನಿ ನದಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಉಳಿದಂತೆ ದಕ್ಷಿಣ ಕನ್ನಡ ಸಂಪಾಜೆಯ ಚೌಕಿ, ಕಲ್ಲುಗುಂಡಿ, ಗೂನಡ್ಕ, ಅರಂತೋಡು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಕಲ್ಲುಗುಂಡಿಯ ಮುಖ್ಯ ಪೇಟೆಯತ್ತ ಹೊಳೆಯ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಎರಡು ಗಂಟೆಗಳಿಂದ ನಿರಂತರವಾಗಿ ಒಂದೇ ಸಮನ ಮಳೆ ಸುರಿಯುತ್ತಿದ್ದು ಪಯಸ್ವಿನಿ ಉಕ್ಕೇರುವ ಸಾಧ್ಯತೆ ದಟ್ಟವಾಗಿದೆ. ಇನ್ನು ಕೊಡಗಿನ -ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗ ಅರೆಕಲ್ಲು ಸಮೀಪದಲ್ಲಿ ಜಲಸ್ಫೋಟವಾಗುವ ಸಾಧ್ಯತೆ ಇದ್ದು ಪಯಸ್ವಿನಿ ನದಿ ತೀರದಲ್ಲಿ ಇರುವ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ.