ನ್ಯೂಸ್ ನಾಟೌಟ್: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲೂ ಇನ್ನೂ ಇಂತಹ ಸಮಸ್ಯೆಗಳಿಂದ ಜನ ನರಳುತ್ತಿದ್ದಾರೆ ಅನ್ನುವುದನ್ನು ನೋಡುತ್ತಿದ್ದರೆ ನಮಗೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಆಗಿದೆಯೇ? ಅನ್ನುವ ಅನುಮಾನ ಮೂಡಿಸುತ್ತಿದೆ.
ಹೌದು, ಅನಾರೋಗ್ಯಕ್ಕೆ ತುತ್ತಾದ ವೃದ್ದ ಮಹಿಳೆಯೊಬ್ಬರನ್ನು ಬರೋಬ್ಬರಿ ಎರಡು ಕಿ.ಮೀ ದೂರ ಮುಖ್ಯರಸ್ತೆಗೆ ಮರದ ಬಡಿಗೆಗೆ ಬಟ್ಟೆ ಕಟ್ಟಿ ಅದರಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದ ಕರುಣಾಜನಕ ಕಥೆಯ ಸ್ಟೋರಿಯೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಒಂದು ಕಡೆ ನಿತ್ಯ ಕಾಡಾನೆಗಳು ನಡೆದಾಡಿಕೊಂಡು ಹೋಗುವ ದಾರಿ ಮತ್ತೊಂದು ಕಡೆ ತೀರ ಇಕ್ಕಟ್ಟಿನ ಪ್ರದೇಶ. ಇಂತಹ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಇಂದು ಜನ ಆಸ್ಪತ್ರೆಗಳಿಗೆ ಹೋಗುತ್ತಿದ್ದರೆ ಜನ ಪ್ರತಿನಿಧಿಗಳು ಇದನ್ನೆಲ್ಲ ನೋಡಿಕೊಂಡು ಏನು ಮಾಡುತ್ತಿದ್ದಾರೆ ಅನ್ನುವಂತಹ ಟೀಕೆಗಳು ಈಗ ಎಲ್ಲೆಡೆ ಕೇಳಿ ಬರುತ್ತಿದೆ.
ನೂಜಿಬಾಳ್ತಿಲ-ಕೊಣಾಜೆ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಶೋಚನೀಯ ಸ್ಥಿತಿ ಅನಾವರಣಗೊಂಡಿದೆ. ಎಪ್ಪತ್ತು ವರ್ಷದ ಮಹಿಳೆಯೊಬ್ಬರು ಕಾಲು ನೋವಿನಿಂದ ನರಳುತ್ತಿದ್ದ ಹಿನ್ನೆಲೆಯಲ್ಲಿ ಎಂಜಿರ ಮೂಲಕ ಉಪ್ಪಿನಂಗಡಿಗೆ ತುರ್ತಾಗಿ ಕರೆದೊಯ್ಯಬೇಕಿತ್ತು.ಆದರೆ ರಸ್ತೆ ಇದ್ದರೂ ಅಭಿವೃದ್ದಿ ಕಾರಣ ಹಿನ್ನೆಲೆಯಲ್ಲಿ ವಾಹನ ಓಡಾಟ ಕಷ್ಟಕರವಾಗಿತ್ತು. ಹೀಗಾಗಿ ಕುಟುಂಬಸ್ಥರು ಮರದ ಬಡಿಗೆಗೆ ಬಟ್ಟೆಯೊಂದನ್ನು ಕಟ್ಟಿ ಅದರಲ್ಲಿ ಮಹಿಳೆಯನ್ನು ಕುಳ್ಳಿರಿಸಿ ಎಂಜಿರ ಮುಖ್ಯ ರಸ್ತೆಗೆ ತಲುಪಿಸಿದ್ದಾರೆ ಎನ್ನಲಾಗಿದೆ.’ ವೃದ್ದ ಮಹಿಳೆಯನ್ನು ಹೊತ್ತುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಭಾಗದ ಜನರಿಗೆ ಎಂಜಿರ ಹತ್ತಿರದ ಪೇಟೆಯಾಗಿದೆ. ಇತ್ತೀಚೆಗೆ ಸುರಿದ ಮಹಾ ಮಳೆಗೆ ಈ ರಸ್ತೆ ಕೆಸರುಮಯವಾದ ಕಾರಣ ಈ ಭಾಗದ ಜನ ತಮ್ಮ ವಾಹನಗಳನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ ಕಿ.ಮೀ ಗಟ್ಟಲೆ ನಡೆದುಕೊಂಡು ಹೋಗಿ ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಬಳ್ಳಕ್ಕ ಎಂಬಲ್ಲಿ ಆ.19ರಂದು ಈ ಘಟನೆ ನಡೆದಿರುವುದಾಗಿದೆ.