ನ್ಯೂಸ್ ನಾಟೌಟ್ : ರಬ್ಬರ್ ನಿಂದ ಆದಾಯ ಬರುವುದಿಲ್ಲವೆಂದು ಅಡಿಕೆ ತೋಟ ಹಾಕೋದಕ್ಕೆ ಜೆಸಿಬಿ ಯಂತ್ರದಿಂದ ಗುಂಡಿ ತೆಗೆಸುತ್ತಿದ್ದ ಕೃಷಿಕನಿಗೆ ಅಚ್ಚರಿಯೊಂದು ಕಾದಿತ್ತು. ಗುಂಡಿ ತೆಗೆಯುತ್ತಾ ಹೋದಂತೆ ಪ್ರಾಚೀನ ಕಾಲದ ಗುಹೆಯೊಂದು ಕಾಣಿಸಿಕೊಂಡಿದ್ದಲ್ಲದೆ ಅದರೊಳಗೆ ಹಲವಾರು ವಸ್ತುಗಳು ಸಿಕ್ಕಿರುವುದು ಇದೀಗ ರಾಜ್ಯದಾದ್ಯಂತ ಭಾರಿ ಸುದ್ದಿಯಾಗಿದೆ.
ಈ ಘಟನೆ ನಡೆದಿರುವುದು ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕಲ್ಲೆಂಬಿಯಲ್ಲಿ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಈಗಾಗಲೇ ಸ್ಥಳಕ್ಕೆ ಪ್ರಾಚ್ಯವಸ್ತು ಸಂಶೋಧಕರ ತಂಡವೂ ಆಗಮಿಸಿದ್ದು ಸಂಶೋಧನೆ ಆರಂಭಿಸಿದ್ದಾರೆ.
ಗುಹೆ ಪತ್ತೆಯಾಗಿ ಅದರಲ್ಲಿ ಪ್ರಾಚೀನ ಕಾಲದ ಮಣ್ಣಿನ ಪರಿಕರಗಳು ಪತ್ತೆಯಾಗಿದ್ದು ಅಲ್ಲಿನ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ. ಕಲ್ಲೆಂಬಿ ವಿಶ್ವನಾಥ ಗೌಡ ಎಂಬುವವರ ಜಮೀನಿನಲ್ಲಿ ಈ ಪ್ರಾಚೀನ ಪರಿಕರಗಳು ಪತ್ತೆಯಾಗಿದ್ದು ಹಲವು ಕುತೂಹಲಗಳಿಗೂ ಕಾರಣವಾಗಿದೆ.
ಕೆಲಸದ ವೇಳೆ ಇದ್ದಕ್ಕಿದ್ದಂತೆ ಮಣ್ಣಿನಲ್ಲಿ ಸಡಿಲವಾದ ಭಾಗ ಗೋಚರಿಸಿದ್ದು, ಬಾವಿಯಾಕಾರ ಮಾದರಿ ಗುಹೆ ಪತ್ತೆಯಾಗಿದೆ. ಅದನ್ನು ಸೂಕ್ಷವಾಗಿ ಗಮನಿಸಿದಾಗ ಇದರೊಳಗಡೆ ಮಣ್ಣಿನ ಮಡಿಕೆ, ಬಟ್ಟಲು, ಸಣ್ಣ-ಪುಟ್ಟ ಪಾತ್ರೆಗಳ ಅವಶೇಷಗಳು ಪತ್ತೆಯಾಗಿದೆ. ವಿಶೇಷ ರೀತಿಯ ಗುಹೆಯಲ್ಲಿ ಎರಡು ಅಂತರದ ಕೋಣೆಗಳಿರುವಂತೆಯೂ ಕಂಡು ಬಂದಿದೆ. ಮಧ್ಯ ಭಾಗದಲ್ಲಿ ಅಗಲವಾದ ಕಂಬವಿದ್ದು ವಿಶೇಷವಾಗಿದೆ. ಜತೆಗೆ ಹಲವು ಅಚ್ಚರಿಗಳನ್ನು ಸೂಚಿಸುತ್ತಿದೆ.
ಈ ಬಗ್ಗೆ ಸ್ಥಳೀಯರು ಅನೇಕ ದೃಷ್ಟಿಕೋನಗಳಿಂದ ಅವರದ್ದೇ ಆದ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ.ಪುರಾತನ ಕಾಲದಲ್ಲಿ ಉದ್ದೇಶಪೂರ್ವಕವಾಗಿ ಸಣ್ಣ ಮಾದರಿಯ ಗುಹೆ ತೋಡಿ ಪರಿಕರಗಳನ್ನು ಇದರಲ್ಲಿ ಹೂತು ಮುಚ್ಚಿರಬಹುದು ಎಂಬ ಮಾತುಗಳನ್ನಾಡಿದರೆ,ಇನ್ನು ಕೆಲವರು ಇಲ್ಲಿ ಹಿಂದೆ ವಾಸ್ತವ್ಯವಿದ್ದಾಗ ಗುಡ್ಡ ಭಾಗ ಕುಸಿದು ಮಣ್ಣಿನೊಳಗಡೆ ಸಿಲುಕಿರಬಹುದೇ ಎಂಬ ಮಾತುಗಳನ್ನಾಡುತ್ತಿದ್ದಾರೆ.ಉಡುಪಿಯ ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್, ಪ್ರಾಚ್ಯವಸ್ತು ಸಂಶೋಧಕ ಪ್ರೊ.ಟಿ.ಮುರುಗೇಶಿ ಅವರು ಸ್ಥಳಕ್ಕೆ ಆಗಮಿಸಿ ಪರಿಕರಗಳನ್ನು ಸಂಗ್ರಹಿಸಿ, ಅಧ್ಯಯನ ನಡೆಸುತ್ತಿದ್ದಾರೆ. ಈಗಾಗಲೇ ಈ ಪ್ರಾಚೀನ ಪರಿಕರಗಳನ್ನು ತೊಳೆದು ಸ್ವಚ್ಚಗೊಳಿಸಿದ್ದೇವೆ ಮುಂದಿನ ಹದಿನೈದು ದಿನಗಳಲ್ಲಿ ಇದರ ಹಿನ್ನೆಲೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದಾಗಿ ಅವರು ಹೇಳಿದ್ದಾರೆ.ಇವೆಲ್ಲಾ ಕುತೂಹಲಕ್ಕೆ ಉತ್ತರ ಸಿಗಬೇಕಾದರೆ ಹದಿನೈದು ದಿನಗಳವರೆಗೆ ಕಾಯಲೇಬೇಕಿದೆ.