ನ್ಯೂಸ್ ನಾಟೌಟ್: ತಡರಾತ್ರಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಸಂಪಾಜೆ, ಕೊಯನಾಡು, ಕಲ್ಲುಗುಂಡಿಯಲ್ಲಿ ಭಾರಿ ಜಲ ಪ್ರವಾಹ ಉಂಟಾಗಿದೆ. ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಹೊಳೆ ಸಮೀಪದಲ್ಲಿದ್ದ ಮನೆಗಳಿಗೆ ಏಕಾಏಕಿ ಕೆಸರು ಮಿಶ್ರಿತ ನೀರು ನುಗ್ಗಿದೆ. ತಡೆಯಲು ಸಾಧ್ಯವಾಗದ ಕಮಟು ವಾಸೆನೆಯ ಕೆಸರು ನೀರು ನೋಡ ನೋಡುತ್ತಿದ್ದಂತೆ ಹಲವಾರು ಮನೆಯ ಒಳಕ್ಕೆ ನುಗ್ಗಿತು. ಪಾತ್ರಗಳು, ಬೆಲೆ ಬಾಳುವ ವಸ್ತುಗಳು ನೀರು ಪಾಲಾದವು. ಸಂಪಾಜೆಯ ಚೌಕಿಯ ಬಳಿ ಇರುವ ಗಣೇಶ್ ಪಿಟ್ಟರ್ ಅವರ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್ , ವಾಷಿಂಗ್ ಮೆಷಿನ್ , ಇನ್ವರ್ಟರ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಹಲವಾರು ಬೆಲೆ ಬಾಳುವ ವಸ್ತುಗಳು ನೀರಿನಲ್ಲಿ ಮುಳುಗಿ ಸಂಪೂರ್ಣವಾಗಿ ಹಾಳಾದವು. ಅಲ್ಲದೆ ಗಣೇಶ್ ಅವರು ಗ್ಯಾರೇಜ್ ನಡೆಸುತ್ತಿದ್ದು ಗ್ಯಾರೇಜ್ ನಲ್ಲಿದ್ದ ಪಂಪ್, ರಿಪೇರಿಗೆ ಬಂದಿದ್ದ ವಾಹನಗಳು ನೀರಿನಲ್ಲಿ ಮುಳುಗಿ ಹೋದವು. ಒಟ್ಟಾರೆ ಗಣೇಶ್ ಅವರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಉಳಿದಂತೆ ಗುಂಡ್ಯ ಪುರುಷೋತ್ತಮ್ , ಜಯರಾಮ್ ರಾವ್ ಅವರ ಮನೆಗೂ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ. ಇದಿಷ್ಟು ಸಂಪಾಜೆಯ ಚೌಕಿ ಬಳಿಯ ನೋಟವಾಗಿದೆ.
ಉಳಿದಂತೆ ಕೈಪಡ್ಕ ಸಮೀಪದ ಕೊಂದಲಕಾಡು ನಾರಾಯಣ್ ಭಟ್ ಅವರಿಗೆ ಸೇರಿದ ಬಾಡಿಗೆ ಮನೆಗಳಿಗೂ ನೀರು ನುಗ್ಗಿದ್ದು ಅಲ್ಲಿನ ಜನರು ಪರದಾಟ ನಡೆಸಿದರು. ಒಂದು ಕಡೆ ವಿದ್ಯುತ್ ಇಲ್ಲ. ಮತ್ತೊಂದು ಕಡೆ ರಭಸದಿಂದ ಹರಿಯುತ್ತಿರುವ ಪ್ರವಾಹದಿಂದ ಜನರು ಪ್ಯಾನಿಕ್ ಆಗಿದ್ದರು. ಈ ವೇಳೆ ವಾಹನಗಳೆಲ್ಲ ಕಲ್ಲುಗುಂಡಿಯ ಕೂಲಿಶೆಡ್ ಬಳಿ ಸಿಕ್ಕಿ ಹಾಕಿಕೊಂಡವು. ಇಷ್ಟೆಲ್ಲ ಆಗುವ ಹೊತ್ತಿಗೆ ತಡರಾತ್ರಿ ಸುಮಾರು ೨ ಗಂಟೆ ಆಗಿತ್ತು. ರಾತ್ರಿ ೧೧.೩೦ರಿಂದ ಒಂದೇ ಸಮನೆ ಮಳೆಯ ವೇಗ ಹೆಚ್ಚಾಗಿತ್ತು.
ಕೊಯನಾಡುವಿನಲ್ಲಿ ಕೆಲವು ಮನೆಗಳು ಜಲಾವೃತವಾಗಿದೆ. ಕೊಯನಾಡು ಕಿಂಡಿ ಅಣೆಕಟ್ಟು ಬಳಿ ಮನೆಗಳು ಜಲಾವೃತವಾಗಿ ಸಮೀಪದ ಸುರಕ್ಷಿತ ಮನೆಯೊಂದರಲ್ಲಿ ಸ್ಥಳೀಯರು ಆಶ್ರಯ ಪಡೆದರು.