ನ್ಯೂಸ್ ನಾಟೌಟ್: ರಾಷ್ಟ್ರೀಯ ಹೆದ್ದಾರಿ 4ರ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹತ್ತಿರದ ಬಾಳೇನಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗಿನ ಜಾವ ನಡೆದ ಕ್ರೂಸರ್ ಅಪಘಾತದಲ್ಲಿ 9 ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ.
ಕ್ರೂಸರ್ ವಾಹನದ ಟೈರ್ ಸಿಡಿದು, ಉರುಳಿ ಬಿದ್ದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅದೇ ಸಮಯಕ್ಕೆ ಹಿಂದಿನಿಂದ ಬರುತ್ತಿದ್ದ ಲಾರಿ ಕ್ರೂಸರ್ಗೆ ಗುದ್ದಿದ್ದರಿಂದ ಹೆಚ್ಚಿನ ಪ್ರಾಣಹಾನಿ ಸಂಭವಿಸಿದೆ. ಕ್ರೂಸರ್ ವಾಹನದಲ್ಲಿ ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನ ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದರು. 12 ಜನಕ್ಕೆ ಅವಕಾಶವಿದ್ದ ಸ್ಥಳದಲ್ಲಿ 24 ಮಂದಿ ಸಂಚರಿಸುತ್ತಿದ್ದರು. ವಾಹನ ಚಾಲಕ ಮದ್ಯ ಸೇವನೆ ಮಾಡಿದ್ದರಿಂದ ನಿಯಂತ್ರಣ ತಪ್ಪಿದೆ. ಹಿರಿಯೂರು ಸಮೀಪ ಚಹಾ ಸೇವಿಸಲು ನಿಲ್ಲಿಸಿದ್ದ ಸಮಯದಲ್ಲಿ ಚಾಲಕ ಮದ್ಯ ಸೇವಿಸಿ ಬಂದಿದ್ದ. ಆಗಾಗ ಸ್ಟೇರಿಂಗ್ ಮೇಲೆಯೇ ನಿದ್ದೆ ಮಾಡುತ್ತಿದ್ದ ಎಂದು ಅಪಘಾತದಲ್ಲಿ ಗಾಯಗೊಂಡವರು ದೂರಿದರು. ರಾಯಚೂರು ಜಿಲ್ಲೆಯ ಸಿರಿವಾರ ತಾಲ್ಲೂಕಿನ ಕುರಕುಂದ ಗ್ರಾಮದ ಒಂದೇ ಕುಟುಂಬದ ಪ್ರಭು (30), ಪತ್ನಿ ಸುಜಾತ (25), ಪುತ್ರ ವಿನೋದ್ (3) ಹಾಗೂ ಮೀನಾಕ್ಷಿ, ಕಸನದೊಡ್ಡಿಯ ಬಸಮ್ಮ (50), ವಾಹನ ಚಾಲಕ ಕೃಷ್ಣಪ್ಪ ಮೃತಪಟ್ಟಿದ್ದಾರೆ. ಇನ್ನೂ ಮೂವರ ಹೆಸರು ಗೊತ್ತಾಗಬೇಕಿದೆ.