ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಬೆನ್ನಲ್ಲೇ ಸುಳ್ಯ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಆ.೪ ರಂದು (ಇಂದು) ಎಲ್ಲ ಶಾಲಾ – ಕಾಲೇಜಿಗೆ ರಜೆ ಘೋಷಿಸಲಾಗಿದೆ. ಕಡಬ ತಾಲೂಕಿನಲ್ಲಿ ಮಳೆಯ ಪ್ರಮಾಣ ನೋಡಿಕೊಂಡು ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ಘೋಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ ಆದೇಶಿಸಿದ್ದಾರೆ.
ರುದ್ರ ನರ್ತನ ಮಾಡುತ್ತಿರುವ ಮಳೆ ಇನ್ನೂ ನಾಲ್ಕು ದಿನ ಸುರಿಯಲಿದೆ. ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಅಗಸ್ಟ್ ೪ ಹಾಗೂ ಆಗಸ್ಟ್ ೫ರಂದು ಅತೀ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ನದಿ, ಹೊಳೆ, ಸಮುದ್ರದ ಸಮೀಪ ಯಾರೂ ಹೋಗಬಾರದು ಎಂದು ತಿಳಿಸಲಾಗಿದೆ. ಉಳಿದಂತೆ ಬೆಳಗಾವಿ, ಹಾವೇರಿಯಲ್ಲಿ ಮುಂದಿನ ಎರಡು ದಿನ ಮಳೆ ಬರಲಿದ್ದು ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ ಬೆಂಗಳೂರು, ಬೆಂಗಳೂರು ಗ್ರಾಮಾಂತರ , ಚಿಕ್ಕಬಳ್ಳಾಪುರಕ್ಕೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.