ನ್ಯೂಸ್ ನಾಟೌಟ್ : ಪಯಸ್ವಿನಿ ನದಿ ತಟದಲ್ಲಿ ಪ್ರವಾಹ ಉಕ್ಕೇರಿದ್ದು ಇದೀಗ ಸ್ವಲ್ಪ..ಸ್ವಲ್ಪವೇ ಕಡಿಮೆಯಾಗುತ್ತಿದೆ. ಆದರೆ ಮಳೆ ಇನ್ನೂ ಪೂರ್ತಿಯಾಗಿ ನಿಂತಿಲ್ಲವಾದುದರಿಂದ ಒಂದು ರೀತಿಯ ಆತಂಕ ಇದ್ದೇ ಇದೆ.
ಗೂನಡ್ಕದಲ್ಲಿ ಮಳೆಯಿಂದ ಹಲವಾರು ಮನೆಗಳು ಮುಳುಗಿವೆ. ಎಲ್ಲರನ್ನೂ ಸುರಕ್ಷಿತ ತಾಣಗಳಿಗೆ ಕರೆದೊಯ್ಯಲಾಗಿದೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ತಿಳಿಸಿದ್ದಾರೆ. ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಗಿದೆ. ಹಾಗಂತ ಮಳೆ ಇನ್ನೂ ಸಂಪೂರ್ಣವಾಗಿ ಕಡಿಮೆ ಆಗಿಲ್ಲ. ಕಲ್ಲುಗುಂಡಿಯ ಕೂಲಿ ಶೆಡ್ ನಲ್ಲಿ ಮಳೆ ನೀರು ನಿಂತಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಮಡಿಕೇರಿ -ಮಂಗಳೂರು ರಸ್ತೆ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಕಲ್ಲುಗುಂಡಿಯ ಪೆಟ್ರೋಲ್ ಬಂಕ್ ಸಮೀಪದವರೆಗೆ ನೀರು ಆವರಿಸಿದ್ದು ಸೊಂಟದ ವರೆಗೆ ನೀರು ನಿಂತಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರಾಗಿರುವ ಎಸ್ ಕೆ ಹನೀಫ್ ಅವರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಉಳಿದಂತೆ ಕೊಡಗು ಸಂಪಾಜೆಯ ಆಸ್ಪತ್ರೆ ರಸ್ತೆಯಲ್ಲಿ ಸಾಬ್ಜಾನ್ ಅವರ ಮನೆಯ ಸಮೀಪ ಮಳೆ ನೀರು ಭಾರಿ ರಭಸದಿಂದ ಹರಿಯುತ್ತಿದೆ ಎಂದು ಶಬರೀಶ ಕುದ್ಕುಳಿ ತಿಳಿಸಿದ್ದಾರೆ.