ನ್ಯೂಸ್ ನಾಟೌಟ್ : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಕದ್ದು ಮುಚ್ಚಿ ಬಿಲದೊಳಗೆ ತಲೆಮರೆಸಿಕೊಂಡಿದ್ದ ಮೂವರು ಮುಖ್ಯ ಹಂತಕರನ್ನು ಈಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂವರ ಬಂಧನವಾಗುತ್ತಿದ್ದಂತೆ ಇವರಿಗೆ ಯಾರು ಸಹಾಯ ಮಾಡಿದ್ದರು ಅನ್ನುವ ಒಂದೊಂದೇ ವಿಚಾರಗಳು ಈಗ ಬಹಿರಂಗವಾಗುತ್ತಿದೆ. ಪ್ರಕರಣದ ಹಿಂದೆ ಇರುವ ಸಂಘಟನೆಯೊಂದರ ಇನ್ನಷ್ಟು ಮಂದಿಯನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದು ಇನ್ನೂ ಕೆಲವರ ಬಂಧನವಾದರೂ ಅಚ್ಚರಿ ಇಲ್ಲ.
ಕಳಂಜದಲ್ಲಿ ಮಸೂದ್ ಹತ್ಯೆಬೆನ್ನಲ್ಲೇ ಸಂಘಟನೆಯೊಂದರ ಸದಸ್ಯರು ಪ್ರತೀಕಾರರ ಮಾತುಗಳನ್ನಾಡಿದ್ದರು. ಈ ವೇಳೆ ಕೋಳಿ ಮಾಂಸ ಕಡಿಯುವ ಕೆಲಸ ಮಾಡಿಕೊಂಡಿದ್ದ ರಿಯಾಜ್ ಅಂಕತ್ತಡ್ಕ ಅನ್ನುವ ಹಂತಕ ಪ್ರವೀಣ್ ಗೆ ತಾನೇ ಕಡಿಯುವುದಾಗಿ ಹೇಳಿಕೊಂಡಿದ್ದ. ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ರಿಯಾಜ್ ದಿನನಿತ್ಯ ಮಾಂಸ ಕೊಚ್ಚುತ್ತಿದ್ದ. ಇದರಿಂದ ಆತನಿಗೆ ರಕ್ತದ ಬಗ್ಗೆ ಯಾವುದೇ ಅಂಜಿಕೆ ಅಲರ್ಜಿಗಳಿರಲಿಲ್ಲ. ಹೀಗಾಗಿ ಹಂತಕರ ತಂಡದಲ್ಲಿ ಪ್ರವೀಣ್ ಗೆ ಆತ ಕೊಚ್ಚುವುದಕ್ಕೆ ಸಿದ್ಧವಾಗಿದ್ದ ಎನ್ನಲಾಗಿದೆ. ಹತ್ಯೆ ಮಾಡುವ ದಿನವೂ ಈತನೇ ಮೊದಲನೆಯದಾಗಿ ಪ್ರವೀಣ್ ಮೇಲೆ ಎರಗಿದ್ದ ಎನ್ನುವ ಮಾಹಿತಿಗಳು ಕೂಡ ತನಿಖೆಯಿಂದ ಬೆಳಕಿಗೆ ಬಂದಿದೆ.
ಪ್ರವೀಣ್ ಹತ್ಯೆಯ ವೇಳೆ ತಾನು ಅಂಕತ್ತಡ್ಕದ ಮನೆಯಲ್ಲಿಯೇ ಇದ್ದೆ ಅನ್ನುವುದನ್ನು ಬಿಂಭಿಸುವುದಕ್ಕೆ, ಪೊಲೀಸರ ತನಿಖೆಯ ದಾರಿ ತಪ್ಪಿಸುವುದಕ್ಕೆ ಮೊಬೈಲ್ ಫೋನ್ ಅನ್ನು ಹತ್ಯೆ ಮಾಡುವ ದಿನ ತನ್ನ ಮನೆಯಲ್ಲಿಯೇ ಬಿಟ್ಟು ಹೋಗಿದ್ದ. ಪೊಲೀಸರು ಮೊಬೈಲ್ ಟ್ರೇಸ್ ಮಾಡಿದ್ರೆ ತನ್ನ ಬಗ್ಗೆ ಯಾವುದೇ ಅನುಮಾನ ಬಾರದಂತೆ ಪ್ಲಾನ್ ಮಾಡಿದ್ದ. ಆದರೆ ರಿಯಾಜ್ ಬಗ್ಗೆ ಪೊಲೀಸರು ಒಂದು ಕಣ್ಣು ಇಟ್ಟಿದ್ದರು. ಈತನ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದಾಗ ಈತನ ಬ್ಯಾಂಕ್ ಅಕೌಂಟ್ ಗೆ ಭಾರಿ ಮೊತ್ತದ ಹಣದ ಜಮಾವಣೆ ಆಗಿತ್ತು. ಇದು ಪೊಲೀಸರ ಅನುಮಾನ ಹೆಚ್ಚಿಸಿತು. ಹೀಗಾಗಿ ಹೆಚ್ಚಿನ ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಕೊಲೆ ನಡೆಸುವುದಕ್ಕೂ ಮೊದಲು ಹಂತಕರ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಆಗಿದೆ ಎನ್ನಲಾಗುತ್ತಿದೆ.