ನ್ಯೂಸ್ ನಾಟೌಟ್: ರಾಜ್ಯದಾದ್ಯಂತ ಭಾರಿ ಸದ್ದು ಮಾಡಿದ ಹಿಂದೂ ಪರ ಕಾರ್ಯಕರ್ತ, ಬಿಜೆಪಿ ಯುವ ಮೋರ್ಚಾ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಸ್ವತಃ ಗೃಹ ಸಚಿವರೇ ಪೊಲೀಸರ ಈ ಹೇಳಿಕೆಯನ್ನು ಬಹಿರಂಗಪಡಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ನಡೆಸಿದವರ ಸ್ಪಷ್ಟ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಅದನ್ನು ಇಂದು ಸ್ವತಃ ಗೃಹ ಸಚಿವರಾಗಿರುವ ಅರಗ ಜ್ಞಾನೇಂದ್ರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಹಿಂದೆ ಹಂತಕರು ಕೆ.ಎಲ್ . ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ನ ಬೈಕ್ ಹೊಂದಿದ್ದರು. ಅವರು ಕೇರಳ ಮೂಲದವರು ಹತ್ಯೆಯ ಬಳಿಕ ಕೇರಳಕ್ಕೆ ಓಡಿ ಹೋಗಿ ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗುತ್ತಿತ್ತು. ಇದೀಗ ಪೊಲೀಸರು ನೀಡಿರುವ ವರದಿಯ ಪ್ರಕಾರ ಹಂತಕರೆಲ್ಲರು ಸುಳ್ಯ ಹಾಗೂ ಬೆಳ್ಳಾರೆಯವರೇ ಆಗಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸುಳ್ಯದವರೊಬ್ಬರು, ಬೆಳ್ಳಾರೆಯವರೊಬ್ಬರು ಈ ಕೃತ್ಯದಲ್ಲಿದ್ದಾರೆಂದು ತಿಳಿದು ಬಂದಿದೆ. ಸದ್ಯ ಅವರು ತಮ್ಮ ಮೊಬೈಲ್ ಗಳನ್ನು ಮನೆಯಲ್ಲಿಯೇ ಬಿಟ್ಟು ಕಣ್ಮರೆಯಾಗಿದ್ದಾರೆ. ಪೊಲೀಸರ ಕಣ್ಣಿಗೂ ಬೀಳದಂತೆ ಅಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಪಿಗಳ ಹೆಸರು, ಅವರು ಯಾರು ಎನ್ನುವುದು ಗೊತ್ತಾಗಿದೆ. ಅವರನ್ನು ಬಂಧಿಸುವುದೊಂದೇ ಬಾಕಿ. ಶೀಘ್ರದಲ್ಲೇ ಪೊಲೀಸ್ ಇಲಾಖೆ ಆ ಕೆಲಸ ಮಾಡುತ್ತದೆ ಎಂದು ಸಚಿವರು ಪ್ರಶ್ನೆಗೆ ಉತ್ತರಿಸಿದ್ದಾರೆ.