ನ್ಯೂಸ್ ನಾಟೌಟ್: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಮುಖ್ಯ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮೂಲಕ ಹತ್ಯೆ ನಡೆದು ಬರೋಬ್ಬರಿ ಹದಿನೈದು ದಿನದ ನಂತರ ಪ್ರಮುಖ ಆರೋಪಿಗಳನ್ನು ಬಂಧಿಸಿದಂತಾಗಿದೆ. ಜುಲೈ ೨೬ರಂದು ಹತ್ಯೆ ಪ್ರಕರಣ ನಡೆದಿತ್ತು. ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದ ಏಳಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು. ಇದೀಗ ಮೂವರು ಆರೋಪಿಗಳಾದ ಶಿಯಾಬ್, ಬಶೀರ್, ರಿಯಾಜ್ ಅನ್ನುವವರನ್ನು ಬಂಧಿಸಲಾಗಿದೆ. ಎಲಿಮಲೆ, ಬೆಳ್ಳಾರೆ ಹಾಗೂ ಸುಳ್ಯದವರು ಎಂದು ತಿಳಿಸಲಾಗಿದೆ. ಇನ್ನೂ ಕೂಡ ಕೆಲವು ಮಂದಿ ಪ್ರಕರಣದಲ್ಲಿ ಭಾಗಿಯಾಗಿದ್ದು ಅವರನ್ನು ಬಂಧಿಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳನ್ನು ಪೊಲೀಸರಿಗೆ ಬಂಧಿಸುವುದು ಅಷ್ಟು ಸುಲಭ ಕೆಲಸವಾಗಿರಲಿಲ್ಲ. ಪ್ರವೀಣ್ ನೆತ್ತರು ಹರಿಸಿದ ಬಳಿಕ ಹಂತಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರಂತರವಾಗಿ ತಿರುಗಾಡುತ್ತಲೇ ಇದ್ದರು. ಇವರನ್ನು ಹಿಡಿಯುವುದು ಕಷ್ಟ ಎಂದು ಅಂದುಕೊಳ್ಳುವಾಗಲೇ ಪೊಲೀಸರು ಮುಂಬೈ ಸರಣಿ ಸ್ಫೋಟದ ಪಾತಕಿ ದಾವೂದ್ ಇಬ್ರಾಹಿಂ ಬಂಧನಕ್ಕೆ ಹೊರಡಿಸಿದ ಮಾದರಿಯಲ್ಲಿ ಬ್ರಹ್ಮಾಸ್ತ್ರವೊಂದನ್ನು ಪ್ರಯೋಗ ಮಾಡಿದರು. ಇದರಿಂದ ಆರೋಪಿಗಳನ್ನು ಹಿಡಿಯುವುದಕ್ಕೆ ಸಾಧ್ಯವಾಯಿತು ಅನ್ನುವುದು ಪೊಲೀಸ್ ಇಲಾಖೆಯಿಂದ ಕೇಳಿ ಬರುತ್ತಿರುವ ಮಾತಾಗಿದೆ.
ಪೊಲೀಸರು ಆರೋಪಿಗಳು ಶರಣಾಗದಿದ್ದರೆ ಅವರ ಸಂಪೂರ್ಣ ಆಸ್ತಿ ಮುಟ್ಟುಗೋಲು ಹಾಕುವ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡಿದರು. ಆರೋಪಿಗಳು ತಾವೇ ಬಂದು ಪೊಲೀಸರ ಎದುರು ಶರಣಾಗುವಂತೆ ಮಾಡಿದ್ದರು. ತೀರ ಅಪರೂಪದ ಪ್ರಕರಣಗಳಲ್ಲಿ ಬಳಕೆ ಮಾಡಲಾಗುವ ವಾರೆಂಟ್ ಅನ್ನು ಜಾರಿಗೊಳಿಸಲಾಗಿತ್ತು. ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಹೊರಡಿಸಿದ್ದ ಮಾದರಿಯಲ್ಲಿ ವಾರೆಂಟ್ ಅನ್ನು ಜಾರಿಗೆ ತರಲಾಯಿತು. ಒಂದು ವಾರದ ಒಳಗೆ ಶರಣಾಗದಿದ್ದರೆ ಆಸ್ತಿಯನ್ನು ಮುಟ್ಟುಗೋಲು ಹಾಕುವುದಾಗಿ ಪೊಲೀಸರು ಘೋಷಣೆ ಮಾಡಿದ್ದರು. ಈ ಆದೇಶವನ್ನು ಪ್ರಕಟಿಸುತ್ತಿದ್ದಂತೆ ಬಿಲದೊಳಗೆ ಅಡಗಿಕೊಂಡಿದ್ದ ಹಂತಕರು ತಾವಾಗಿಯೇ ಬಂದು ಶರಣಾಗಿದ್ದಾರೆ.