ನ್ಯೂಸ್ ನಾಟೌಟ್: ಬಿಜೆಪಿ ಯುವ ಮೋರ್ಚಾ ಪ್ರವೀಣ್ ನೆಟ್ಟಾರ್ ಭೀಕರ ಕೊಲೆಯಲ್ಲಿ ತಲ್ವಾರ್ ಹಿಡಿದು ನೇರವಾಗಿ ಭಾಗಿಯಾದ ಮೂವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಯಾರು? ಎಲ್ಲಿಯವರು? ಎನ್ನುವುದರ ಬಗ್ಗೆ ಸಹಜವಾಗಿಯೇ ಜನಮನದಲ್ಲಿ ಭಾರಿ ಕುತೂಹಲವಿದೆ.
ಪ್ರವೀಣ್ ಮನೆಗೆ ಹೊರಡುವುದಕ್ಕೆ ಬೈಕ್ ಏರಿ ಇನ್ನೇನು ಮನೆಗೆ ಹೊರಟು ನಿಂತಿದ್ದಾಗ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನ ರೈನ್ ಕೋಟ್ ಅಂಗಡಿಯಲ್ಲಿಯೇ ಬಿಟ್ಟು ಹೋಗಿದೆ ಅನ್ನುವ ಕಾರಣಕ್ಕೆ ಪ್ರವೀಣ್ ಸ್ವಲ್ಪ ದೂರ ಹೋಗಿ ಬೈಕ್ ನಿಲ್ಲಿಸಿದ್ದರು. ಅಕ್ಷಯ ಚಿಕನ್ ಸೆಂಟರ್ ನ ಅಣತಿ ದೂರದಲ್ಲಿ ಹೊಂಚು ಹಾಕಿ ಕುಳಿತಿದ್ದ ಮೂವರು ಹಂತಕರು ಪ್ರವೀಣ್ ಮೇಲೆರಗಿ ತಲ್ವಾರ್ನಿಂದ ಕತ್ತಿಗೆ ಕಡಿದು ಕತ್ತಲಿನಲ್ಲಿ ಕೆ ಎಲ್ ರಿಜಿಸ್ಟ್ರೇಶನ್ ನಂಬರ್ ನ ಬೈಕ್ ಏರಿ ಪರಾರಿಯಾಗಿದ್ದರು. ಈ ಹಂತಕರ ಹುಡುಕಾಟ ಕಳೆದ ಕೆಲವು ದಿನಗಳಿಂದ ನಡೆಯುತ್ತಿತ್ತು. ಮೂವತ್ತಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದರು. ಇವರಲ್ಲಿ ಹತ್ಯೆಯಲ್ಲಿ ಏಳು ಆರೋಪಿಗಳು ಭಾಗಿಯಾಗಿದ್ದು ತನಿಖೆಯಿಂದ ತಿಳಿದು ಬಂದಿತ್ತು. ಎಸ್ಡಿಪಿಐ ಹಾಗೂ ಪಿಎಫ್ಐ ನಂಟು ಹಂತಕರಿಗೆ ಇದೆ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.
ಎಲಿಮಲೆ, ಬೆಳ್ಳಾರೆ, ಸುಳ್ಯದ ಹಂತಕರು
ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲಿ ಪಾಲ್ಗೊಂಡವರು ಶಿಯಾಬ್, ಬಶೀರ್ ಹಾಗೂ ರಿಯಾಜ್ ಎಂದು ಗುರುತಿಸಲಾಗಿದೆ. ಇವರು ಮೂವರು ಕೂಡ ಊರಿನವರೇ ಆಗಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆಯ ದಿಕ್ಕು ತಪ್ಪಿಸುವುದಕ್ಕಾಗಿ ಕೆಎಲ್ ರಿಜಿಸ್ಟ್ರೇಶನ್ ಬೈಕ್ ಅನ್ನು ಬಳಸಿಕೊಂಡಿದ್ದರು ಎನ್ನಲಾಗಿದೆ. ಇದೀಗ ಬಹು ಮುಖ್ಯವಾಗಿ ಒಬ್ಬ ಎಲಿಮಲೆ, ಇನ್ನೋರ್ವ ಸುಳ್ಯ ಹಾಗೂ ಮತ್ತೋರ್ವ ಹಂತಕ ಬೆಳ್ಳಾರೆಯವ ಎನ್ನುವುದು ತಿಳಿದು ಬಂದಿದೆ, ಈ ಬಗ್ಗೆ ಮಧ್ಯಾಹ್ನ ಅಧಿಕೃತ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಿದ್ದಾರೆ.