ನ್ಯೂಸ್ ನಾಟೌಟ್ : ಬಿಜೆಪಿ ಯುವ ಮೋರ್ಚಾ ನಾಯಕ ಹಾಗೂ ಸಕ್ರಿಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಮುಖ್ಯ ಹಂತಕರನ್ನು ಬಂಧಿಸಲು ಸಾಧ್ಯವಾಗಿಲ್ಲ ಎನ್ನುವ ಟೀಕೆಗಳ ನಡುವೆಯೇ ಪೊಲೀಸರು ಸಮಾಧಾನಕರ ಸುದ್ದಿ ನೀಡಿದ್ದಾರೆ.
ಹೌದು, ಪ್ರವೀಣ್ ಅವರನ್ನು ಕೊಚ್ಚಿ ಕೊಲೆಗೈದ ಹಂತಕರು ಈಗಾಗಲೇ ಯಾರು ಅಂತ ಗೊತ್ತಾಗಿದೆ. ಅವರೇ ಆರೋಪಿಗಳು ಎನ್ನುವುದು ನಮಗೆ ಗೊತ್ತಿದ್ದರೂ ಬಂಧಿಸುವುಕ್ಕೆ ಒಂದಷ್ಟು ಸಾಕ್ಷಿಗಳು ಇನ್ನೂ ಬಲಗೊಳ್ಳಬೇಕಿದೆ. ತನಿಖೆ ತೀವ್ರಗೊಂಡಿದೆ. ಅವರನ್ನು ಬಂಧಿಸದೆ ಕರ್ನಾಟಕ ಪೊಲೀಸ್ ಬಿಡುವುದಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತನಿಖೆಯಲ್ಲಿ ಒಂದಷ್ಟು ಲೀಡ್ ಪಡೆದುಕೊಂಡಿದ್ದೇವೆ. ಎಲ್ಲವೂ ನಮ್ಮ ಕಂಟ್ರೋಲ್ ನಲ್ಲಿದೆ. ಹಂತಕರ ಬಂಧನಕ್ಕೆ ಎಲ್ಲ ಸಿದ್ಧತೆಗಳು ಕೂಡ ನಡೆದಿದೆ. ಆದರೆ ಒಂದಷ್ಟು ಮಾಹಿತಿಗಳು ಪಕ್ಕಾ ಆಗಿ ಬಿಟ್ಟರೆ ನಮ್ಮ ದಾರಿ ಸುಲಭವಾಗುತ್ತದೆ, ಈ ಕುರಿತಾಗಿ ಈಗಲೇ ಎಲ್ಲವನ್ನು ಹೇಳಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಹಂತಕರನ್ನು ಬಂಧಿಸಿ ಮುಂದಿನ ದಿನಗಳಲ್ಲಿ ಸಮಗ್ರ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು. ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಆರು ಹಂತಕರನ್ನು ಬಂಧಿಸಲಾಗಿದೆ. ಆದರೆ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಇನ್ನೂ ಮುಖ್ಯ ಹಂತಕರನ್ನು ಹಿಡಿಯಲು ಸಾಧ್ಯವಾಗದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬರುತ್ತಿವೆ.