ನ್ಯೂಸ್ ನಾಟೌಟ್: ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಂಬಂಧಪಟ್ಟಂತೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಆರೋಪಿಗಳು ಯಾವ ರೀತಿಯಲ್ಲಿ ಪ್ರವೀಣ್ ಹತ್ಯೆಗೆ ಸ್ಕೆಚ್ ಮಾಡಿದ್ದರು ಅನ್ನುವ ಸತ್ಯ ಇದೀಗ ಬಯಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಸುಳ್ಯದ ಅಬೀದ್ ಎಂಬಾತ ಫೀಲ್ಡ್ ಗೆ ಇಳಿದು ಪ್ರವೀಣ್ ಹತ್ಯೆಗೆ ಸಂಚು ರೂಪಿಸಿದ್ದ ಎನ್ನುವ ಮಹತ್ವದ ಮಾಹಿತಿಯನ್ನು ತನಿಖಾಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ. ಮಾತ್ರವಲ್ಲ ಪ್ರವೀಣ್ ಹತ್ಯೆಗೆ ಎರಡು ಸಲ ಪ್ರಯತ್ನಿಸಿ ವಿಫಲವಾಗಿದ್ದ ಈ ತಂಡ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾದ ಬಗ್ಗೆಯೂ ತನಿಖೆ ವೇಳೆ ಮಾಹಿತಿ ಹೊರ ಬಿದ್ದಿದೆ.
ಜೂನ್ ೨೩ ಹಾಗೂ ಜೂನ್ ೨೪ರಂದು ಪ್ರವೀಣ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಕೆಎಲ್ ರಿಜಿಸ್ಟ್ರೇಶನ್ ಹೊಂದಿದ್ದ ಅದೇ ಬೈಕ್ ನಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ತಂಡ ಪ್ರವೀಣ್ ಗಾಗಿ ಅಕ್ಷಯ ಚಿಕನ್ ಸೆಂಟರ್ನ ಸ್ವಲ್ಪ ಮುಂದೆ ಹೊಂಚು ಹಾಕುತ್ತಾ ಕುಳಿತಿತ್ತು. ಆದರೆ ಏನು ಪ್ರಯೋಜನವಾಗಿರಲಿಲ್ಲ. ಏಕೆಂದರೆ ಅಂಗಡಿ ಮುಂದೆ ಜನರಿದ್ದುದರಿಂದ ಹತ್ಯೆ ಮಾಡುವುದಕ್ಕೆ ಸಾಧ್ಯವಾಗದೆ ಆ ತಂಡ ವಾಪಸ್ ಹೋಗಿತ್ತು. ಜೂನ್ ೨೪ರಂದು ಸಂಜೆ ೪.೩೦ಕ್ಕೆ ಸ್ಪಾಟ್ ಗೆ ಬಂದಿದ್ದ ಹಂತಕರು ಮತ್ತೊಮ್ಮೆ ಜನರನ್ನು ನೋಡಿ ವಾಪಸ್ ತೆರಳಿತ್ತು. ಎರಡು ಬಾರಿ ಪ್ರವೀಣ್ ಹತ್ಯೆಗೆ ನಡೆಸಿದ ಟಾರ್ಗೆಟ್ ಮಿಸ್ ಆಗಿದೆ. ಹಂತಕರ ಆ ತಂಡದಲ್ಲಿ ಅಬೀದ್ ಸುಳ್ಯ ಕೂಡ ಇದ್ದ ಅನ್ನುವುದು ತನಿಖೆ ವೇಳೆ ಬಯಲಾಗಿದೆ. ಇನ್ನೋರ್ವ ಆರೋಪಿ ನೌಫಲ್ ಬೆಳ್ಳಾರೆ ಪ್ರವೀಣ್ ಅಂಗಡಿಯಲ್ಲಿ ಇದ್ದಾನೋ ಇಲ್ಲವೋ ಎನ್ನುವ ಮೆಸೇಜ್ ಅನ್ನು ಹಂತಕರಿಗೆ ನೀಡಿದ್ದಾನೆ ಎನ್ನುವುದು ತಿಳಿದು ಬಂದಿದೆ. ಹೀಗಾಗಿ ಪ್ರವೀಣ್ ಹತ್ಯೆಗೆ ಮೂರನೇ ಪ್ಲಾನ್ ಮಾಡಲಾಗಿತ್ತು. ಅದರಲ್ಲಿ ಹಂತಕರು ಯಶಸ್ವಿಯಾಗಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.