ನ್ಯೂಸ್ ನಾಟೌಟ್: ಶೀಘ್ರದಲ್ಲೇ ಪಿಎಫ್ಐ , ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿರುವ ಮಾತಿಗೆ ಮತ್ತಷ್ಟು ಬಲ ಬಂದಿದೆ. ಇದೀಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಸಂಘಟನೆಗಳ ನಿಷೇಧದ ಬಗ್ಗೆ ಮಾತನಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ಕುರಿತು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ. ಯಾವುದೇ ಹಂತದಲ್ಲಾದರೂ ಇವುಗಳನ್ನು ನಿಷೇಧಿಸುವ ವಿಶ್ವಾಸವಿದೆ. ಆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಶೆಟ್ಟರ್ ಹೇಳಿದರು. ಮುಂದುವರಿದು ಮಾತನಾಡಿದ ಅವರು, ‘ಸಿದ್ದರಾಮಯ್ಯ ಜನ್ಮದಿನದ ಅಮೃತಮಹೋತ್ಸವದಿಂದ ಬಿಜೆಪಿಗೆ ನಡುಕ ಉಂಟಾಗಿಲ್ಲ. ಪಕ್ಷದ ಬೆಳವಣಿಗೆ, ಸಂಘಟನೆಗೆ ಇದರಿಂದ ಯಾವುದೇ ಧಕ್ಕೆ ಆಗಿಲ್ಲ. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೂಚನೆಯಂತೆ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡರು. ಅದು ತೋರಿಕೆಯ ಒಗ್ಗಟ್ಟು ಅಷ್ಟೇ. ಕಾಂಗ್ರೆಸ್ನಲ್ಲಿನ ಆಂತರಿಕ ಜಗಳ ದೊಡ್ಡದಾಗುತ್ತಿದ್ದು, ಈ ಜನ್ಮ ದಿನಾಚರಣೆಯಿಂದ ಕಾಂಗ್ರೆಸ್ಗೇ ಸಮಸ್ಯೆಯಾಗಿದೆ’ ಎಂದರು.