ನ್ಯೂಸ್ ನಾಟೌಟ್ : ಜಲ ಸ್ಫೋಟದಿಂದ ಸಂಪಾಜೆ, ಕಲ್ಲುಗುಂಡಿ, ಗೂನಡ್ಕ ಭಾಗದ ಜನರು ತತ್ತರಿಸಿದ್ದಾರೆ. ಅನೇಕರು ಮನೆ ಕಳೆದುಕೊಂಡಿದ್ದಾರೆ. ಜೀವನ ಕಳೆದುಕೊಂಡಿದ್ದಾರೆ. ಮುಂದೇನು? ಅಂತ ಕಾಳಜಿ ಕೇಂದ್ರದಲ್ಲಿ ಕಣ್ಣೀರಿಡುತ್ತಾ ಕುಳಿತಿದ್ದಾರೆ. ಇಷ್ಟೆಲ್ಲ ಅನಾಹುತಗಳಾಗಿದ್ದರೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಾತ್ರ ಇತ್ತ ತಿರುಗಿಯೂ ನೋಡಿಲ್ಲ. ಇದು ಜನಸಾಮಾನ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜನರ ಕುಂದು ಕೊರತೆಗಳನ್ನು ಆಲಿಸುವುದಕ್ಕೆ, ಸಮಸ್ಯೆ ಎದುರಾದಾಗ ಜತೆಯಾಗಿ ಇದ್ದು ಧೈರ್ಯ ತುಂಬುವುದಕ್ಕೆ ಉಸ್ತುವಾರಿ ಸಚಿವರು ಅನ್ನುವ ಹುದ್ಧೆ ಇರುತ್ತದೆ. ಪ್ರಾಕೃತಿಕ ವಿಕೋಪದಂತಹ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಷ್ಟೇ ಕಷ್ಟವಿದ್ದರೂ ಏನೇ ಕೆಲಸವಿದ್ದರೂ ಒಂದು ಘಳಿಗೆ ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಈ ಪ್ರದೇಶಗಳಿಗೆ ಭೇಟಿ ಕೊಡಬೇಕಿತ್ತು. ಏಕೆಂದರೆ ಸಂಪಾಜೆಯಲ್ಲಿ ಮೊನ್ನೆ ಬಂದ ಪ್ರವಾಹಕ್ಕೆ ಸಿಕ್ಕಿ ಹಲವಾರು ಜನರ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳೆಲ್ಲ ನೀರು ಪಾಲಾಗಿವೆ. ಎಲ್ಲವನ್ನೂ ಕಳೆದುಕೊಂಡು ಈಗ ಕಾಳಜಿ ಕೇಂದ್ರದಲ್ಲಿ ಕಣ್ಣೀರು ಹಾಕುತ್ತಿರುವ ಜನರ ನೋವನ್ನು ಸಚಿವರು ಆಲಿಸಬೇಕು. ಇದು ಉಸ್ತುವಾರಿ ಸಚಿವರ ಮೂಲಭೂತ ಕರ್ತವ್ಯ. ಆದರೆ ಸಚಿವರು ಸುಳ್ಯದ ವರೆಗೆ ಬಂದು ಅಲ್ಲಿಂದ ತೆರಳಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಿದ್ದಲ್ಲಿ ಸಂಪಾಜೆಯ ಪ್ರವಾಹ ಪೀಡಿತ ಪ್ರದೇಶಗಳನ್ನು ಭೇಟಿ ಮಾಡದಿರುವುದಕ್ಕೆ ಇರುವ ನೈಜ ಕಾರಣಗಳೇನು ? ಅನ್ನುವುದನ್ನು ಸ್ವತಃ ಸಚಿವರೇ ಬಹಿರಂಗಪಡಿಸಬೇಕಿದೆ.
ಉಸ್ತುವಾರಿ ಸಚಿವರು ಸಂಪಾಜೆ, ಕಲ್ಲುಗುಂಡಿ, ಗೂನಡ್ಕಕ್ಕೆ ಭೇಟಿ ನೀಡದಿರುವ ಬಗ್ಗೆ ಕಾರಣ ಕೇಳಿ ನ್ಯೂಸ್ ನಾಟೌಟ್ ತಂಡ ಉಸ್ತುವಾರಿ ಸಚಿವರ ಪಿಎ ಆಗಿರುವ ಶಶಿಕಾಂತ್ ಅವರಿಗೆ ಕರೆ ಮಾಡಿ ಮಾಹಿತಿ ಕೇಳಿದಾಗ ಅವರು ಒಂದು ಕ್ಷಣ ಇಲ್ಲ ಭೇಟಿ ನೀಡಲಾಗಿದೆ. ಅಲ್ಲಿ ಯಾರು ಮಾಹಿತಿ ಕೊಟ್ಟಿಲ್ಲ ಅನ್ನಿಸುತ್ತೆ ಅಂದ್ರು. ಮತ್ತೋರ್ವ ಪಿಎ ಆಗಿರುವ ಹರೀಶ್ ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಸಿಗುತ್ತದೆ ಎಂದು ತಿಳಿಸಿದರು. ಆದರೆ ಹರೀಶ್ ಅನ್ನುವವರಿಗೆ ಎರಡು ಸಲ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಸಂಪಾಜೆ, ಕಲ್ಲುಗುಂಡಿ, ಗೂನಡ್ಕ ಭಾಗ ಪ್ರವಾಹಕ್ಕೆ ಹೆಚ್ಚು ಹಾನಿಗೀಡಾದ ಪ್ರದೇಶ. ಇಲ್ಲಿ ಲಕ್ಷಾಂತರ ರೂ. ನಷ್ಟವಾಗಿದೆ. ಹಲವರ ಮನೆ, ಮನೆಯಲ್ಲಿದ್ದ ವಸ್ತುಗಳು ನೀರುಪಾಲಾಗಿದೆ. ಊಟಕ್ಕೂ ಗತಿ ಇಲ್ಲದಂತಾಗಿ ಇದೀಗ ಕಾಳಜಿ ಕೇಂದ್ರದಲ್ಲಿದ್ದಾರೆ. ನೀರಿನ ಹೊಡೆತಕ್ಕೆ ಸಿಲುಕಿ ವಾಸಕ್ಕೆ ಯೋಗ್ಯವಾದ ಸ್ಥಿತಿಯಲ್ಲಿ ಮನೆಗಳಿಲ್ಲ. ಕಾಳಜಿ ಕೇಂದ್ರದಲ್ಲಿ ವಯಸ್ಸಾದವರು, ಕಾಲೇಜಿಗೆ ಹೋಗುವ ಮಕ್ಕಳು ಇದ್ದಾರೆ. ಅವರ ಕಷ್ಟಗಳನ್ನು ಆಲಿಸುವ ಅದಕ್ಕೊಂದು ಪರಿಹಾರ ಸೂಚಿಸಬೇಕಾದ ಸಚಿವರೇ ಇಲ್ಲಿಗೆ ಆಗಮಿಸದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ತಡವಾಗಿಯಾದರೂ ಸಚಿವರು ಇಲ್ಲಿಗೆ ಆಗಮಿಸಿ ಜನರ ಕಷ್ಟಗಳನ್ನು ಕೇಳಲಿ ಅನ್ನುವುದೇ ನ್ಯೂಸ್ ನಾಟೌಟ್ ಮಾಧ್ಯಮದ ಆಶಯವಾಗಿದೆ.